ಡೇನಿಷ್ ಸಾಹಿತ್ಯ

ಡೇನಿಷ್ ಸಾಹಿತ್ಯದ ಮೂಲ ಇರುವುದು ಜರ್ಮನ್, ಆಂಗ್ಲೋ-ಸ್ಯಾಕ್ಸ್ನ್ ಮತ್ತು ಸ್ಕ್ಯಾಂಡಿನೇವಿಯನ್ ಜನಾಂಗಗಳು ಜೀವನ ಹಾಗೂ ಸಮಾಜದ ಬಗೆಗೆ ಸಾಮಾನ್ಯವಾಗಿ ತಳೆದಿದ್ದ ಕಲ್ಪನೆಯಲ್ಲಿ. ಈ ಕಲ್ಪನೆ ನಾರ್ವೆ ಮತ್ತು ಐಸ್ಲಂಡುಗಳ ಪುರಾತನ ವೀರಕಾವ್ಯ ಮತ್ತು ಅದನ್ನು ಕುರಿತ ಗದ್ಯ ಕೈಪಿಡಿಗಳಲ್ಲಿ ಕಂಡುಬರುತ್ತದೆ. ಆದರೆ ಈ ಸಾಹಿತ್ಯ ಹಲವು ಶತಮಾನಗಳ ಕಾಲ ಲ್ಯಾಟಿನ್ ಭಾಷೆ ಹಾಗೂ ಸಾಹಿತ್ಯಗಳ ಹಿಡಿತಕ್ಕೆ ಸಿಕ್ಕಿತ್ತು. ಅನಂತರ ಜರ್ಮನಿ, ಫ್ರಾನ್ಸ್ ಮತ್ತು ಇಂಗ್ಲಿಷ್ ಮಾತನಾಡುವ ದೇಶಗಳ ಪ್ರಭಾವ ಒಂದರ ಮೇಲೊಂದು ಅಲೆಯಂತೆ ಬಂತು. ಇಪ್ಪತ್ತನೆಯ ಶತಮಾನದಲ್ಲಂತೂ ಇಂಗ್ಲಿಷ್ ಸಾಹಿತ್ಯದ ಪ್ರಭಾವ ಎದ್ದುಕಾಣುತ್ತದೆ. 

	ಡೆನ್‍ಮಾರ್ಕ್ ಮತ್ತು ಸ್ವೀಡನ್‍ಗಳ ಭಾಷೆಗಳೂ ಸಾಹಿತ್ಯಗಳೂ ಬೇರೆ ಬೇರೆಯಾದದ್ದು ಕ್ರಿ.ಶ. ಸುಮಾರು 1000ದಲ್ಲಿ. ಆದರೂ ಹದಿನಾಲ್ಕನೆಯ ಶತಮಾನದಿಂದ 1814ರ ವರೆಗೂ ಡೆನ್‍ಮಾರ್ಕ್ ಮತ್ತು ನಾರ್ವೆಗಳು ರಾಜಕೀಯವಾಗಿ ಒಂದೇ ಆಗಿದ್ದುವು. ಆದ್ದರಿಂದ ಸಂಸ್ಕøತಿ ಮತ್ತು ಸಾಹಿತ್ಯಗಳಲ್ಲೂ ಅವು ಒಂದೇ ಆಗಿದ್ದುವು. ಪರಿಣಾಮವಾಗಿ ಡೇನಿಷ್ ಸಾಹಿತ್ಯದಲ್ಲಿ ವಿಖ್ಯಾತರಾದ ಯೋಹಾನ್ ಲುಡ್‍ವಿಗ್ ಹೋಲ್‍ಬರ್ಗ್, ಯೋಹಾನ್ ಹರ್ಮನ್ ವೆಸ್ಸಲ್‍ರಂಥ ಹಲವು ಪ್ರಮುಖ ಲೇಖಕರು ನಾರ್ವೆಯಲ್ಲಿ ಹುಟ್ಟಿದವರು. 

 ರೂನಿಕ್ ಯುಗ : ಕ್ರಿ.ಶ. 850-1050. ಡೇನಿಷ್ ಸಾಹಿತ್ಯದ ಅತ್ಯಂತ ಪುರಾತನ ರೂಪ ದೊರೆಯುವುದು ವೈಕಿಂಗ್ ವೀರರುಗಳ ಸ್ಮಾರಕಗಳಾದ ಸುಮಾರು 275 ರೂನಿಕ್ ಶಾಸನಗಳಲ್ಲಿ. ರೂನಿಕ್ ಲಿಪಿಯಲ್ಲಿ ಬರೆದಿರುವುದರಿಂದ ಇವುಗಳಿಗೆ ಆ ಹೆಸರು. ಈ ಶಾಸನಗಳಲ್ಲಿ ಗದ್ಯಪದ್ಯಗಳು ಒಂದಾದಮೇಲೊಂದು ಬರುತ್ತವೆ. ಇವುಗಳಿಂದ ಆ ಯುಗದ ಜನಜೀವನದ ಜೊತೆಗೆ ಡೇನಿಷ್ ವೀರಕಾವ್ಯದ ರೂಪ ರಚನೆಗಳೂ ತಿಳಿದುಬರುತ್ತವೆ. 

ಮಧ್ಯಯುಗ : ಕ್ರಿ.ಶ. ಸು. 1050-1500. ಕ್ಯಾತೊಲಿಕ್ ಚರ್ಚಿನ ಅಂತರ ರಾಷ್ಟ್ರೀಯ ಭಾಷೆಯಾದ ಲ್ಯಾಟಿನ್ ಕ್ರಿ.ಶ. 1000ದ ಸುಮಾರಿಗೆ ರೂನ್ ಭಾಷೆಯ ಸ್ಥಾನವನ್ನು ಆಕ್ರಮಿಸತೊಡಗಿತು. ಮಧ್ಯಯುಗದ ಆದಿಯಲ್ಲಿ ಡೆನ್‍ಮಾರ್ಕಿನ ಪ್ರಮುಖ ಸಾಹಿತ್ಯವೆಂದರೆ ಚರ್ಚಿನ ಅಧಿಕಾರಿಗಳು ಬರೆದ ಕಾಲಾನುಕ್ರಮಣಿಗಳು, ವಂಶಾನುಕ್ರಮಣಿಗಳು ಮತ್ತು ಸಂತರ ಜೀವಿತ ಕಥೆಗಳು. ಇವುಗಳಲ್ಲಿ ದಿ ಲೆಜೆಂಡ್ ಆಫ್ ಕೆನೂಟ್ (1120) ಮತ್ತು ಕ್ರಾನಿಕರ್ ರಾಸ್ಕಿಲ್ ಡೆನ್ಸ್ (1150) ಇವೆರಡೂ ಸೇರಿವೆ. ಮೊದಲನೆಯದನ್ನು ಬರೆದವ ಏಲ್‍ನಾತ್ ಎಂಬ ಇಂಗ್ಲಿಷ್ ಸಂನ್ಯಾಸಿ. ಎರಡೆಯದನ್ನು ಬರೆದವರು ಲುಂಡ್ ನಗರದ ಆರ್ಚ್ ಬಿಷಪ್ ಮತ್ತು ಅವನ ಅಧಿಕಾರಿಗಳು. ಅಧಿಕಾರದ ಕೇಂದ್ರೀಕರಣವಾಗುತ್ತಿದ್ದ ಈ ಕಾಲದಲ್ಲಿ ಈ ಕಾಲಾನುಕ್ರಮಣಿ ಪ್ರಜಾತಂತ್ರದ ದೃಷ್ಟಿಯನ್ನು ಪ್ರಬಲವಾಗಿ ಎತ್ತಿಹಿಡಿಯುತ್ತದೆ. ಇದೊಂದು ಗಮನ ಸೆಳೆಯುವ ಸಂಗತಿ. 

	1157ರಿಂದ 1227 ರ ವರೆಗೂ ಯುದ್ಧಗಳು ನಡೆದು ಡೆನ್ಮಾರ್ಕ್ ವಿಸ್ತರಣಗೊಂಡು ಬಾಲ್ಟಿಕ್ ಸಮುದ್ರದ ದಕ್ಷಿಣತೀರವನ್ನು ವಶಪಡಿಸಿಕೊಂಡಿತು. ರಾಜರ ಸಾಧನೆಗಳನ್ನು ಹೊಗಳುವ ಅದ್ಭುತವಾದ ಐತಿಹಾಸಿಕ ಕೃತಿಗಳು ಈ ಅವಧಿಯಲ್ಲಿ ಹುಟ್ಟಿದವು. ಶ್ರೇಷ್ಠಯೋಧನೂ ರಾಜನೀತಿ ಪಟವೂ ಆದ ಲುಂಡ್‍ನ ಆರ್ಚ್‍ಬಿಷಪ್ ನೀಡಿದ ಸ್ಫೂತಿಯೇ ಈ ಕೃತಿಗಳಿಗೆಲ್ಲ ಕಾರಣ. ಹಿಸ್ಟೋರಿಯಾ ರೀಗಮ್‍ಡ್ಯಾನೀ ಕಾಂಪೆಂಡಿಯೋಸಾ ಎಂಬ ಚರಿತ್ರೆಯನ್ನು ಆಗೆಸೆನ್ ಎಂಬಾತ ಬರೆದ. ಆದರೆ ಲ್ಯಾಟಿನ್ನಿನಲ್ಲಿ ಬರೆದ ಮಧ್ಯಯುಗದ ಡೇನಿಷ್ ಸಾಹಿತ್ಯದ ಅತ್ಯತ್ತಮ ಕೃತಿಯೆಂದರೆ ಗೆಸ್ಟಡ್ಯಾನೋರಮ್ (ಡೇನರ ಸಾಹಸಗಳು) ಎಂಬ ಗ್ರಂಥ. 16 ಭಾಗಗಳನ್ನೊಳಗೊಂಡ ಈ ಗ್ರಂಥವನ್ನು ಬರೆಯಲು 1180 ರಿಂದ 1219ರ ವರೆಗೆ 39 ವರ್ಷಗಳು ಬೇಕಾಯಿತು. ಇದನ್ನು ಬರೆದವ ಸ್ಯಾಕ್ಸೋ ಗ್ರಮಾಟಿಕಸ್ ಎಂಬಾತ. ಆಲಿವರ್‍ಎಲ್ಟನ್ ಎಂಬ ಇಂಗ್ಲಿಷ್ ಲೇಖಕ ಇದರ ಮೊದಲ ಒಂಬತ್ತು ಭಾಗಗಳನ್ನು ತನ್ನ ಡೇನಿಷ್ ಹಿಸ್ಟರಿ ಆಫ್ ಸ್ಯಾಕ್ಸೋ ಗ್ರಮಾಟಿಕಸ್ ಎಂಬ ಕೃತಿಯಲ್ಲಿ ಇಂಗ್ಲಿಷಿಗೆ ಭಾಷಾಂತರಿಸಿದ್ದಾನೆ. ಸ್ಯಾಕ್ಸೋ ಗ್ರಮಾಟಿಸ್ಸನ ಕೃತಿ ಪ್ರಾಚೀನ ದಂತಕಥೆಗಳ ಅತ್ಯಂತ ಶ್ರೀಮಂತವಾದ ಭಂಡಾರ. ಷೇಕ್ಸ್‍ಪಿಯರನ ವಿಖ್ಯಾತ ಟ್ರ್ಯಾಜೆಡಿಯಾದ ಹ್ಯಾಮ್ಲೆಟ್‍ನ ಆಕರವಾದ ಆಮ್ಲೆತ್‍ನ ಕಥೆ ಇರುವುದು ಅದರಲ್ಲೇ. 

	8000 ಹೆಕ್ಸಾಮೀಟರ್ ಪಂಕ್ತಿಗಳ ಹೆಕ್ಸೀಮೆರಾನ್ (ಆರು ದಿನಗಳು) ಎಂಬುದು ಇದೇ ಕಾಲದ ಬೃಹತ್ ಲ್ಯಾಟಿನ್ ಕಾವ್ಯ. ಇದರ ಕರ್ತೃ ಲುಂಡ್‍ನ ಆರ್ಚ್‍ಬಿಷಪ್ಪನಾದ ಆಂಡರ್ಸ್ ಸುನೇಸನ್ (1167-1228) ಎಂಬಾತ. ಬೈಬಲಿನ ಜೆನೆಸಿಸ್ ಪ್ರಕರಣದಲ್ಲಿ ವರ್ಣಿಸಿರುವಂತೆ ಜಗತ್ತಿನ ಸೃಷ್ಟಿಯನ್ನು ವಿವರಿಸುವ ಈ ಕಾವ್ಯ ಮಧ್ಯಯುಗದ ಲ್ಯಾಟಿನ್ ಪಾಂಡಿತ್ಯಕ್ಕೆ ಹೆಗ್ಗುರುತಾಗಿದೆ. 

	ಡೇನಿಷ್ ಭಾಷೆಯ ಅತ್ಯಂತ ಪುರಾತನ ಹಸ್ತಪತ್ರಿಗಳು ಪ್ರಾದೇಶಿಕ ಶಾಸನಗಳನ್ನು ಕುರಿತವು. ಇವುಗಳಲ್ಲಿ ಅತ್ಯಂತ ಹಿಂದಿನವು ಸ್ಕೇನಿಯಾ ಮತ್ತು ಜೀಲಂಡ್ ಪ್ರದೇಶಗಳ ಶಾಸನಗಳು. ಆದರೆ ಎರಡನೆಯ ಪಾಲ್ಡಿಮಾರ್ ಘೋಷಿಸಿದ ಜಟ್‍ಲಂಡ್ ಲಾ ಎಂಬುದು ಅತ್ಯಂತ ಪ್ರಸಿದ್ಧವಾದದ್ದು. ಇದರ ಕರ್ತೃ ವೈಬರ್ಗಿನ ಬಿಷಪ್ ಆದ ಗುನ್ನರ್ ಎಂಬಾತ. ಇದರ ಮುಖಪತ್ರದಲ್ಲಿ ಮೆಡ್ ಲವ್ ಸ್ಕಲ್ ಲ್ಯಾಂಡ್ ಬಿಗ್ಸ್ (ರ್ಹೈಮ್ ಕ್ರಾನಿಕಲ್) ಎಂಬುದು. ಇದರಲ್ಲಿ ಒಬ್ಬೊಬ್ಬ ರಾಜನೂ ತನ್ನ ಕಥೆಯನ್ನು ಅಮೂಲಾಗ್ರವಾಗಿ ಹೇಳಿಕೊಳ್ಳುತ್ತಾನೆ ; ಎಂದರೆ ಹುಟ್ಟು, ಬಾಳು, ಸಾವುಗಳನ್ನಲ್ಲದೆ ತನ್ನ ಶವಸಂಸ್ಕಾರವನ್ನೂ ಕಥಿಸುತ್ತಾನೆ. 1495ರಲ್ಲಿ ಡೇನಿಷ್ ಭಾಷೆಯಲ್ಲಿ ಮೊಟ್ಟ ಮೊದಲಿಗೆ ಅಚ್ಚಾದ ಪುಸ್ತಕ ಇದೇ. 

	ಮಧ್ಯಯುಗದ ಉತ್ತರಭಾಗದಲ್ಲಿ ಡೇನಿಷ್ ಭಾಷೆ ಲ್ಯಾಟಿನ್‍ಗಿಂತ ಮೇಲುಗೈಯಾಗಿತ್ತು. ವರ್ಜಿನ್ ಮೇರಿಯನ್ನು ಕುರಿತ ದಂತಕಥೆಗಳು ಹಾಗೂ ಗೀತಗಳಲ್ಲದೆ, ಲೂಸಿಡೇರಿಯಸ್ ಎಂಬುದರಂಥ ವಿಚಿತ್ರ ಸಂಗತಿಗಳನ್ನೊಳಗೊಂಡ ಜನಪ್ರಿಯ ಕೃತಿಗಳು ಹುಟ್ಟಿದವು. ಹೆನ್ರಿಕ್ ಹಾರ್ಪ್‍ಸ್ಟ್ರಂಗ್ ಎಂಬಾತ ಬರೆದ ಮೆಡಿಕಲ್ ಬುಕ್ಸ್ ಮತ್ತು ಪೀಡರ್ ಲಾಲ್ ಎಂಬಾತ ಸಂಗ್ರಹಿಸಿದ ಅರ್ಥಗರ್ಭಿತವಾದ ಗಾದೆಗಳು ಈ ಕಾಲದಲ್ಲಿ ಇತರ ಕೃತಿಗಳು. 

	ಆದರೆ ಮಧ್ಯಯುಗದ ಡೇನಿಷ್ ಸಾಹಿತ್ಯದ ಅತ್ಯಮೂಲ್ಯ ನಿಧಿಗಳೆಂದರೆ ಲಾವಣಿಗಳು. ಬ್ರಿಟನ್ ದೇಶವನ್ನು ಬಿಟ್ಟರೆ ಯೂರೋಪಿನ ಇನ್ನಾವ ದೇಶದಲ್ಲೂ ಲಾವಣಿಗಳ ಇಷ್ಟೊಂದು ದೊಡ್ಡ ಸಮುದಾಯವಿಲ್ಲ. 16ನೆಯ ಶತಮಾನದಲ್ಲಿ ಎಲ್ಲ ಲಾವಣಿಗಳನ್ನೂ ಕೈಬರೆಹದ 40 ಪುಸ್ತಕಗಳಲ್ಲಿ ಸಂಗ್ರಹಿಸಲಾಯಿತು. ಆಂಡರ್ಸ್‍ಸೋರೆನ್ಸನ್ ವೇಡೆಲ್ ಎಂಬಾತ ಸಂಗ್ರಹಿಸಿದ 100 ಲಾವಣಿಗಳು 1591ರಲ್ಲಿ ಮೊಟ್ಟಮೊದಲಾಗಿ ಮುದ್ರಣಕ್ಕೆ ಬಂದುವು. ಆಕ್ಸೆಲ್ ಓಲ್‍ರಿಕ್ (1864-1917) ಎಂಬವನು 500-600 ಲಾವಣಿಗಳ ಸಮಗ್ರ ಸಂಕಲನವನ್ನು ಶಾಸ್ತ್ರೀಯವಾಗಿ ಸಂಪಾದಿಸಿ ಏಳು ಸಂಪುಟಗಳಲ್ಲಿ ಪ್ರಕಟಿಸಿದ. ಈತನೇ ಸಂಪಾದಿಸಿದ ಸಣ್ಣ ಸಂಕಲನವೊಂದನ್ನು ಇ. ಎಮ್. ಸ್ಮಿತ್ ಡ್ಯಾಮ್ಟಿಯರ್ ಎಂಬಾತ ಇಂಗ್ಲಿಷಿಗೆ ಭಾಷಾಂತರಿಸಿ (ಎ ಬುಕ್ ಆಫ್ ಡೇನಿಷ್ ಬ್ಯಾಲಡ್ಸ್) ಪ್ರಕಟಿಸಿದ್ದಾನೆ. 

	12ನೆಯ ಶತಮಾನದಲ್ಲಿ ಜನರಿಗೆ ಅಚ್ಚುಮೆಚ್ಚಾಗಿದ್ದ ಶ್ರೇಣಿನೃತ್ಯಗಳಲ್ಲಿ ಈ ಲಾವಣಿಗಳು ತುಂಬ ನೆರವಾದುವು. ಡೇನಿಷ್ ಲಾವಣಿಗಳು ಯೂರೋಪಿನ ಲಾವಣಿಗಳ ಪರಂಪರೆಗೆ ಸೇರಿದ ಒಂದು ಅಂಶವಾದರೂ ಅವುಗಳಿಗೆ ಸ್ವಂತವಾದೊಂದು ವೈಶಿಷ್ಟ್ಯವಿದೆ. ಉನ್ನತ ವರ್ಗದ ಸಂಸ್ಕøತಿಯಿಂದ ಅವು ಜನ್ಮತಳೆದುವೆಂದು ಅವುಗಳ ವಸ್ತುಗಳನ್ನು ಪರಿಶೀಲಿಸುವುದರಿಂದ ಕಂಡುಬರುತ್ತದೆ. ವೀರರ ಸಾಹಸಗಳನ್ನು ಕುರಿತ ಬ್ಯಾಲಡ್ಸ್ ಆಫ್ ಷಿವಲ್ರಿ ಎಂಬ ಲಾವಣಿಗಳಲ್ಲಂತು ಈ ಸಂಗತಿ ಎದ್ದುಕಾಣುತ್ತದೆ. ಈ ಲಾವಣಿಗಳಲ್ಲಿ ವರಿಷ್ಠವರ್ಗದ ಜೀವನನ್ನು-ಎಂದರೆ, ಅವರ ಕುಲಕಲಹಗಳು, ಪ್ರಣಯಗಳು, ಮೃಗಯಾವಿಹಾರಗಳು, ಯುದ್ಧಗಳು, ಮತ್ತು ದಿನನಿತ್ಯದ ಜೀವನ-ಮುಂತಾದವು ಸಮಗ್ರವಾಗಿ ಚಿತ್ರಿತವಾಗಿವೆ. 

	ಮತಸುಧಾರಣೆಯ ಯುಗ (16ನೆಯ ಶತಮಾನ) : ಇಡೀ ಯೂರೋಪಿನ ಸ್ವರೂಪವನ್ನೇ ಬದಲಾಯಿಸಿದ ನವೋದಯ ಕ್ರಾಂತಿಗೆ ಮತಸುಧಾರಣೆಯೇ ನಾಂದಿಯಾಯಿತು. ಡೆನ್‍ಮಾರ್ಕಿನಲ್ಲಿ ಆದದ್ದೂ ಹೀಗೆಯೇ. ಮುದ್ರಣಕಲೆ ಆಗತಾನೆ ಬಳಕೆಗೆ ಬಂದಿದ್ದುದರಿಂದ ಕ್ಯಾತೊಲಿಕರಿಗೂ ಸುಧಾರಕರಿಗೂ ನಡೆದ ವಾಗ್ಯುದ್ಧಗಳನ್ನು ಕುರಿತ ಕಿರುಹೊತ್ತಗೆಗಳೂ ವಿಡಂಬನಗಳೂ ಪ್ರವಾಹ ರೂಪದಲ್ಲಿ ಬರತೊಡಗಿದುವು. ಇವುಗಳಲ್ಲಿ ದಿಫಾಕ್ಸ್ ಬುಕ್, ಬ್ರದರ್ ರಸ್ ಮತ್ತು ದಿ ಡಾನ್ಸ್ ಆಫ್ ಡೆತ್ ಎಂಬುದು ಗಮನಾರ್ಹವಾದವು. 

	ಈ ವಾಗ್ಯುದ್ಧಕಾರರಲ್ಲಿ ಅತ್ಯಂತ ದೊಡ್ಡ ವ್ಯಕ್ತಿಯೆಂದರೆ ಕ್ಯಾತೊಲಿಕ್ ಪಕ್ಷದ ವೀರ ಸಮರ್ಥಕನಾದ ಪಾಲ್ ಹೆಲ್ಗೆಸನ್ (ಹು. 1480) ಎಂಬ ಸಂನ್ಯಾಸಿ ಕ್ಯಾತೊಲಿಕ್ ಚರ್ಚಿನಲ್ಲಿ ಸುಧಾರಣೆಯಾಗುವುದು ಅಗತ್ಯವೆಂಬುದನ್ನು ಒಪ್ಪಿಕೊಂಡರೂ ಅಂಥ ಸುಧಾರಣೆ ಅಂತಃಪರಿವರ್ತನೆಯಿಂದಲೇ ಆಗಬೇಕೆಂದೂ ಚರ್ಚಿನ ವಿರುದ್ಧ ಪ್ರತ್ಯಕ್ಷವಾಗಿ ಕ್ರಾಂತಿ ಎಬ್ಬಿಸುವುದು ಅನುಚಿತವೆಂದೂ ಈತನ ವಾದ. ಇದಕ್ಕಾಗಿ ಈತನ ಎದುರಾಳಿಗಳು ಇವನನ್ನು ಸಮಯಸಾಧಕ ಪಾಲ್ ಎಂದು ಜರೆದರು. ಸ್ಕಿಬ್ಬಿ ಕ್ರಾನಿಕ್ ಎಂಬ ಐತಿಹಾಸಿಕ ಗ್ರಂಥ ಈತನ ಅಮೂಲ್ಯ ಕೃತಿ. ದುರದೃಷ್ಟದಿಂದ ಈ ಕೃತಿ 1534ರಲ್ಲಿ ಒಂದು ವಾಕ್ಯದ ಮಧ್ಯದಲ್ಲೇ ನಿಂತುಹೋಗಿದೆ. ಹೆಲ್ಗೆಸನ್ನನ ಗತಿಯೇನಾಯಿತೋ ಗೊತ್ತೇ ಆಗಿಲ್ಲ. ಲ್ಯೂತರನ ಅನುಯಾಯಿಯೂ ಡೆನ್‍ಮಾರ್ಕಿನಲ್ಲಿ ಮತಸುಧಾರಣೆಯ ನಾಯಕನೂ ಆದ ಹಾನ್ಸ್ ಟೌಸನ್ (1494-1561) ಎಂಬಾತ ಹೆಲ್ಗೆಸನ್ನನ ಪ್ರಮುಖ ಎದುರಾಳಿ. ಈತ ಬರೆದ ಧರ್ಮೋಪದೇಶಗಳ ಗ್ರಂಥವೊಂದು ತುಂಬ ಜನಪ್ರಿಯವಾಗಿ ಈತನ ಹೆಸರು ಜನಜನಿತವಾಯಿತು. ಲ್ಯೂತರನ ಪಂಥದ ಮೊಟ್ಟಮೊದಲ ಬಿಷಪ್ ಆದ ಪೇಡರ್ ಪಲೇಡಿಯಸ್ (1503-1560) ಎಂಬಾತ ತನ್ನ ವಿಸಿಟಾಟ್ಸ್‍ಬಾಗ್ (ವಿಸಿಟೇಷನ್ ಬುಕ್) ಎಂಬ ಪುಸ್ತಕದಲ್ಲಿ ಈ ಕಾಲದ ಸಾಮಾನ್ಯ ಜನರ ಜೀವನವನ್ನು ಹೃದಯಂಗಮವಾಗಿ ಚಿತ್ರಿಸಿರುವುದಲ್ಲದೆ ತನ್ನ ಪ್ರವಾಸಗಳಲ್ಲಿ ತಾನು ಎದುರಿಸಬೇಕಾಗಿ ಬಂದ ಮಾನವೀಯ ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾನೆ. 

	1514ರಲ್ಲಿ ಕ್ರಿಸ್ಟಿಯರ್ನ್ ಪೇಡರ್ಸನ್ (1480-1554) ಎಂಬಾತ ಸ್ಯಾಕ್ಸೋ ಗ್ರಮಾಟಿಕಸ್ಸನ ಗೆಸ್ಟ ಡ್ಯಾನೋರಮ್ ಎಂಬ ಇತಿಹಾಸ ಗ್ರಂಥವನ್ನು ಸಂಪಾದಿಸಿ ಮುದ್ರಣ ಮಾಡಿದ. ಈತನ ಈ ಮಹತ್ತರ ಕಾರ್ಯದಿಂದ ಮಧ್ಯಯುಗದ ಶ್ರೇಷ್ಠತಮ ಕೃತಿ ನಷ್ಟವಾಗಿ ಹೋಗದೆ ಉಳಿಯಿತು. ಇದಲ್ಲದೆ, ಮೂರನೆಯ ಕ್ರಿಶ್ಚನ್ನನ ಬೈಬಲ್ ಎಂದು ಕರೆದಿರುವ ಡೇನಿಷ್ ಭಾಷಾಂತರಕ್ಕೆ ಈತ ನೀಡಿದ ಕೊಡುಗೆಯೂ ವಿಶೇಷವಾದದ್ದೇ. ಡೇನಿಷ್ ಭಾಷೆ ಸಾಹಿತ್ಯಭಾಷೆಯಾಗಿ ಬೆಳೆಯಲು ಈ ಡೇನಿಷ್ ಬೈಬಲು ಬಹುಮಟ್ಟಿಗೆ ಕಾರಣ. ಡೇನಿಷ್ ಸಾಹಿತ್ಯಕ್ಕೆ ಮತಸುಧಾರಣಾ ಯುಗದ ಅತ್ಯಮೂಲ್ಯ ಕೊಡುಗೆಗಳೆಂದರೆ ಮಾತೃಭಾಷೆಯಲ್ಲಿ ಬರೆದ ಲ್ಯೂತರನ್ ಪ್ರಾರ್ಥನಾಗೀತೆಗಳು ; ಹಾನ್ಸ್ ತಾಮ್ಸನ್ನನ ಡೆನ್ ಡಾನ್ಸ್ಕ್ ಸಾಮ್‍ಬಾಗ್ (1569) ಎಂಬುದರಲ್ಲಿರುವ ಬಹುಪಾಲು ಪ್ರಾರ್ಥನಾಗೀತೆಗಳು ಜರ್ಮನ್ ಇಲ್ಲವೆ ಲ್ಯಾಟಿನ್ ಭಾಷೆಯಿಂದ ಮಾಡಿದ ಭಾಷಾಂತರಗಳೆಂಬುದೇನೊ ನಿಜ. ಆದರೆ ಸ್ವತಂತ್ರ ಪ್ರತಿಭೆಯಿಂದ ಭಾವಗೀತೆಗಳನ್ನು ಬರೆದ ಹಾನ್ಸ್ ಕ್ರಿಸ್ಟನ್‍ಸೆನ್ ಸ್ತೆನ್ (1540-1561) ಎಂಬಾತನಿಗೂ ಈ ಯುಗ ಜನ್ಮ ನೀಡಿತೆಂಬುದನ್ನು ಮರೆಯಲಾಗದು. 

	ಮತಸುಧಾರಣೆಯುಗದ ಸ್ಫೂರ್ತಿಗೆಲ್ಲ ಸುಧಾರಕರಿಗೆ ಜನಸಾಮಾನ್ಯರ ವಿಷಯದಲ್ಲಿದ್ದ ಒಲವೇ ಕಾರಣ. ಆದರೆ ಕಾಲಕ್ರಮದಲ್ಲಿ ಈ ಸ್ಫೂರ್ತಿ ಶಾಸ್ತ್ರ ಪಾಂಡಿತ್ಯದ ರೂಪ ತೆಳೆದು ದೇವತಾಶಾಸ್ತ್ರದ ಗ್ರಂಥಗಳು ಹುಟ್ಟತೊಡಗಿದುವು. ದೇವತಾಶಾಸ್ತ್ರಜ್ಞರಲ್ಲಿ ಅತ್ಯಂತ ಮೇಧಾವಿಯಾದ ನೀಲ್ಸ್ ಹೆಮ್ನಿಂಗ್‍ಸನ್ (1513-1600) ಎಂಬಾತ ಯೂರೋಪಿನಲ್ಲೆಲ್ಲ ವಿಖ್ಯಾತನಾಗಿದ್ದ ಮೆಲಾಂಕ್‍ತಾನ್ ಎಂಬಾತನ ಶಿಷ್ಯ. ಮತಸಿದ್ಧಾಂತಗಳನ್ನು ಕುರಿತ ಪ್ರೌಢಗ್ರಂಥಗಳ ಜೊತೆಗೆ ಈತ ಈ ಲೇಗೆ ನ್ಯಾಟುರೀ (1572) ಎಂಬ ಗ್ರಂಥವನ್ನು ಬರೆದ. ಈ ಕೃತಿಯಿಂದ ಈತ ಮುಂದಿನ ಶತಮಾನದಲ್ಲಿ ನೈಸರ್ಗಿಕ ನಿಯಮವನ್ನು ಪ್ರತಿಪಾದಿಸಿದವರಿಗೆಲ್ಲ ಅಗ್ರಗಾಮಿಯಾದ. 

	ಇದೇ ಕಾಲದಲ್ಲಿ ಇತಿಹಾಸ ಹಾಗೂ ನಿಸರ್ಗ ವಿe್ಞÁನಗಳ ಕ್ಷೇತ್ರಗಳಲ್ಲೂ ದೊಡ್ಡ ಮುನ್ನಡೆಯುಂಟಾಯಿತು. ಆದರೆ ಈ ಯುಗದ ದೃಷ್ಟಿಯಲ್ಲಿ ಈ ಶಾಸ್ತ್ರಗಳು ದೇವತಾಶಾಸ್ತ್ರಕ್ಕಿಂತ ತೀರ ಕೀಳುಮಟ್ಟದವು. ಈ ಕಾಲದ ವರಿಷ್ಠ ವರ್ಗದ ಅನೇಕ ಮಹನೀಯರಲ್ಲಿ ಮುಂದಿನ ನವೋದಯದ ಮನೋಧರ್ಮ ಕಂಡುಬರುತ್ತದೆ. ಏಕೆಂದರೆ ಅವರು ಕಲೆಗಳಿಗೂ ವಿe್ಞÁನಗಳಿಗೂ ಪೋಷಕರಾದರು ಅಥವಾ ತಾವೇ ಕಲಾವಿದರೋ ವಿe್ಞÁನಿಗಳೋ ಆದರು. ಉದಾಹರಣೆಗೆ, ಆಂಡರ್ಸ್ ಸೋರೆನ್ಸನ್ ಮೇಡೆಲ್ (1542-1616) ಎಂಬಾತ ಸ್ಯಾಕ್ಸೋಗ್ರಮಾಟಿ ಕಸ್ಸ ಗೆಸ್ಟ ಸ್ಯಾನೋರಮ್ ಎಂಬ ಗ್ರಂಥದ ಭಾಷಾಂತರವೊಂದನ್ನೂ ಹಿಂದೆ ಹೇಳಿದ ಲಾವಣಿಗಳ ಸಂಕಲನವನ್ನೂ ಪ್ರಕಟಿಸಿದ. ಆರಿಲ್ಡ್ ಹೂಯಿಟ್ ಫೆಲ್ಟ್ (1546-1609) ಎಂಬ ವರಿಷ್ಠ ವರ್ಗದ ವಿದ್ವಾಂಸ ಡಾನ್‍ಮಾಕ್ರ್ಸ್ ರೀಜೆಸ್ ಕ್ರಾನಿಕ್ (ಡೇನಿಷ್ ರಾಜ್ಯದ ಕಾಲಾನುಕ್ರಮಣಿ) ಎಂಬ ಗ್ರಂಥವನ್ನು ಹತ್ತು ಸಂಪುಟಗಳಲ್ಲಿ ಬರೆದ (1596-1603). ವರಿಷ್ಠ ವರ್ಗದ ಟೈಕೋ ಬ್ರಾಹೀ (1546-1601) ಎಂಬ ವಿe್ಞÁನಿ ಖಗೋಳವಿe್ಞÁನದಲ್ಲಿ ಬೆರಗುಗೊಳಿಸುವಷ್ಟು ಖಚಿತವಾದ ಸಂಶೋಧನೆಗಳನ್ನು ಮಾಡಿ ಜಗತ್ಪ್ರಸಿದ್ಧನಾದ. 

	ಡೆನ್‍ಮಾರ್ಕಿನ ರಂಗಭೂಮಿ ಈ ಕಾಲದಲ್ಲಿ ಲ್ಯಾಟಿನ್ ಪಂಥಗಳು ಅಭಿನಯಿಸುತ್ತಿದ್ದ ನಾಟಕಗಳ ಪ್ರಾಬಲ್ಯಕ್ಕೆ ಒಳಪಟ್ಟಿತ್ತು. ಆದರೆ ಹೀರೋನಿಯಮಸ್ ಜಸ್ಟಿಸನ್ ರ್ಯಾಂಚ್ (1539-1607) ಎಂಬ ಪಾದ್ರಿ ಬರೆದ ಕ್ಯಾರಿಗ್ ನಿಡಿಂಗ್ ಎಂಬ ಲಘು ಪ್ರಹಸನದಿಂದ ರಂಗಭೂಮಿಗೆ ಹೊಸ ಕಳೆ ಬಂತು. ಇಂದಿಗೂ ಅದನ್ನು ಅಭಿನಯಿಸುತ್ತಾರೆ. ಹೋಲ್‍ಬರ್ಗಿಗೆ ಮುಂದೆ ಡೆನ್‍ಮಾರ್ಕಿನ ಅತ್ಯತ್ತಮ ನಾಟಕ ಕೃತಿ ಇದೇ. 

ನವೋದಯ ಮತ್ತು ಬರೋಕ್ ಕಾವ್ಯ : 17ನೆಯ ಶತಮಾನ. ಯೂರೋಪಿನಲ್ಲುಂಟಾದ ನವೋದಯ ಡೆನ್ಮಾರ್ಕಿಗೆ ಹರಡಿದ್ದು ತೀರ ತಡವಾಗಿ. ಸು. 1620ರಲ್ಲಿ ನವೋದಯದ ಚಿಹ್ನೆಗಳು ಅಲ್ಲಿ ಕಾಣಿಸತೊಡಗಿದುವು. ಆಗಲೂ ಅದು ಕಾಣಿಸಿಕೊಂಡಿದ್ದು ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಜರ್ಮನ್ ಕೃತಿಗಳ ಅನುಕರಣದಲ್ಲಿ ಮಾತ್ರ. ಡೇನಿಷ್ ನವೋದಯದ ಅನಂತರಕಾಲದ ಪ್ರಧಾನ ಕೃತಿಯಾದ ಹೆಕ್ಸೀಮೆರಾನ್ ಎಂಬುದೂ ಅನುಕರಣವೇ. ಇದನ್ನು ಬರೆದವ ಬಿಷಪ್ ಅಂಡರ್ಸ್ ಆರೆಬೋ (1587-1637). ಸೃಷ್ಟಿಯನ್ನು ಕುರಿತ ಈ ಕಾವ್ಯ ಡಿ ಬಾರ್ತಾ ಎಂಬವನ ಲ ಸೆಮೇನ್ ಎಂಬ ಕಾವ್ಯದ ರೂಪಾಂತರ. ನಾಲ್ಕನೆಯ ಕ್ರಿಶ್ಚನ್ ದೊರೆಯ ಸಚಿವನಾಗಿದ್ದ ಸೋರೆನ್ ಟರ್ಕಲ್‍ಸನ್ ಎಂಬಾತ ಡೇನಿಷ್ ಸಾಹಿತ್ಯದಲ್ಲಿ ಹೊಸತಾಗಿ ಪ್ರಯೋಗಿಸಿದ. ಗ್ರಾಮಜೀವನವನ್ನು ಕುರಿತ ಕಾವ್ಯ ಇನ್ನೂ ಹೆಚ್ಚು ಪ್ರಮಾಣದಲ್ಲಿ ಅನುಕರಣವಾಗಿತ್ತು. ಆದರೆ ಈ ಕೃತಕ ಕಾವ್ಯದಿಂದ ಡೇನಿಷ್ ಭಾಷೆಗೆ ಒಂದು ಉಪಕಾರವಾಯಿತು ; ಅದೇನೆಂದರೆ ಈ ಕಾವ್ಯದ ಪರಿಣಾಮವಾಗಿ ಡೇನಿಷ್ ಭಾಷೆಯಲ್ಲಿ ನಮ್ಯತೆಯೂ ಲಾಲಿತ್ಯವೂ ಉಂಟಾದುವು. 

	ಸ್ವಂತಿಕೆಯೇ ಇಲ್ಲವೆನಿಸುವ ಈ ಯುಗದಲ್ಲಿ ಪ್ರತಿಭಾನ್ವಿತರಾದ ಇಬ್ಬರು ಕವಿಗಳ ಕೃತಿಗಳು ಉಜ್ವಲವಾಗಿ ಕಾಣುತ್ತವೆ. ಚಿತ್ರಾಕರ್ಷಕವಾದ ಡೇನಿಷ್ ಶೈಲಿಯಲ್ಲಿ ಲಘವೂ ವಿನೋದಮಯವೂ ಆದ ಪದ್ಯಗಳನ್ನು ಬರೆದ ಆಂಡರ್ಸ್ ಬೋರ್ಡಿಂಗ್ (1619-1677) ಎಂಬಾತ ಒಬ್ಬ. ಡೆನ್‍ಮಾರ್ಕಿನಲ್ಲಿ ಡೆನ್‍ಡಾನ್ಸ್ಕ್ ಮಕ್ರ್ಯೂರಿಯಸ್ ಎಂಬ ವೃತ್ತಪತ್ರಿಕೆಯನ್ನು ಸ್ಥಾಪಿಸಿ ಬೋರ್ಡಿಂಗ್ ವೃತ್ತ ಪತ್ರಿಕೋದ್ಯಮದ ಜನಕನಾದ. ಈ ಪತ್ರಿಕೆಯಲ್ಲಿ ಈತ ಸಮಾಚಾರವನ್ನು ಅಲೆಕ್ಸಾಂಡ್ರೈನ್ ಛಂದಸ್ಸಿನಲ್ಲಿ ಬರೆಯುತ್ತಿದ್ದ. ತಾಮಸ್ ಕಿಂಗೊ (1634-1703) ಎಂಬ ಪಾದ್ರಿ ಎರಡನೆಯ ಕವಿ. ಈತ ಬರೆದ ಲೌಕಿಕ ಕಾವ್ಯವೆಲ್ಲ ಆ ಯುಗದ ಶಬ್ದಾಡಂಬರದಿಂದ ಕ್ಲೇಶಕರವಾಯಿತು. ಆದರೆ ಈತನ ಪ್ರಾರ್ಥನಾ ಗೀತೆಗಳಲ್ಲಿರುವ ನಾದ ಮತ್ತು ಅರ್ಥಗಾಂಭೀರ್ಯಗಳಿಂದಾಗಿ ಅವು ಈತನನ್ನು ಡೆನ್ಮಾರ್ಕಿನ ಬರೋಕ್ ಸಾಹಿತ್ಯದ ಶಿರೋಮಣಿಯನ್ನಾಗಿ ಮಾಡಿವೆ. ಕಿಂಗೊನ ಪ್ರಾರ್ಥನಾ ಗೀತೆಗಳನ್ನು ಆಂಡಿಲೈಡ್ ಸ್ಯೂಂಗ್‍ಕೋರ್ ಎಂಬಾತ ಎರಡು ಸಂಪುಟಗಳಲ್ಲಿ ಸಂಕಲನಮಾಡಿದ. ಅವುಗಳಲ್ಲಿ ಹಲವನ್ನು ಕರ್ಕ್ ಸಾಮ್‍ಬಾಗ್‍ನಲ್ಲಿ (ಚರ್ಚ್‍ಸಾಮ್‍ಬುಕ್, ಚರ್ಚಿನ ಪ್ರಾರ್ಥನಾಗೀತೆಗಳ ಪುಸ್ತಕ) ಪ್ರಕಟಿಸಲಾಯಿತು (1699). ಅವುಗಳಲ್ಲಿ ಹತ್ತು ಗಿಲ್‍ಬರ್ಟ್ ಟೀಟ್ ಎಂಬುವನು ಪ್ರಕಟಿಸಿದ ದಿ ಹಿಮ್ಸ್ ಆಫ್ ಡೆನ್‍ಮಾರ್ಕ್ ಎಂಬ ಪುಸ್ತಕದಲ್ಲಿ ಇಂಗ್ಲಿಷಿನಲ್ಲಿ ಭಾಷಾಂತರಗೊಂಡಿವೆ. 

	ಗದ್ಯ ಕ್ಷೇತ್ರದಲ್ಲಿ ಈ ಯುಗವನ್ನು ನೆನಹುಗಳ (ಮೆಮ್ವಾರ್ಸ್) ಯುಗವೆನ್ನಬಹುದು. ಡೆನ್‍ಮಾರ್ಕಿನ ನಾಲ್ಕನೆಯ ಕ್ರಿಶ್ಚನ್ ದೊರೆಯ ಮಗಳೂ ಕೌಂಟ್ ಉಲ್‍ಫೆಲ್ಟನ ಹೆಂಡತಿಯೂ ಆದ ಲಿಯೊನಾರಾ ಕ್ರಿಸ್ಟೀನ ಎಂಬಾಕೆಯೂ ಕೋಪನ್‍ಹೇಗನ್ನಿನ ಕೋಟೆಯಲ್ಲಿ ಸೆರೆಯಾಳಾಗಿದ್ದಾಗ ಬರೆದ ಆತ್ಮಕಥೆ ಈ ಬಗೆಯ ಕೃತಿಗಳಲ್ಲೆಲ್ಲ ಅತ್ಯುತ್ತಮವಾದುದು. ಇದರ ಹಸ್ತಪ್ರತಿ 1869ರಲ್ಲಿ ವಿಯನ್ನದಲ್ಲಿ ಮೊದಲಿಗೆ ಮುದ್ರಿತವಾಯಿತು. ಹೃದಯವಿದ್ರಾವಕವಾದ ಈ ಕರುಣಕಥೆಯನ್ನು ಮೆಮ್ವಾರ್ಸ್ ಆಫ್ ಲಿಯೊನಾರಾ ಕ್ರಿಸ್ಟೀನ ಎಂಬ ಇಂಗ್ಲಿಷ್ ಭಾಷಾಂತರದಲ್ಲಿ 1872ರಲ್ಲಿ ಪ್ರಕಟಿಸಲಾಯಿತು. 

	ನವೋದಯಾನಂತರದಲ್ಲಿ ಡೆನ್‍ಮಾರ್ಕಿನಲ್ಲಿ ನಾಟಕಸಾಹಿತ್ಯ ಲೌಕಿಕ ವಿಷಯ ಪ್ರಧಾನವಾಯಿತು. ಗ್ರಿವೆನ್ಸ್ ಓಕ್ ಫ್ರೈಹೆರೆನ್ಸ್ ಕೋಮಿಡೀ (ಕೌಂಟ್ ಹಾಗೂ ಬ್ಯಾರನ್ನುಗಳ ಹಾಸ್ಯ ನಾಟಕ) ಎಂಬ ವಿಡಂಬನಾತ್ಯಕ ನಾಟಕ ಮ್ಮೋಗೆನ್ಸ್ ಸ್ಕೀಟ್ (1650-1694) ಎಂಬ, ವರಿಷ್ಠ ಮೋಲ್‍ಯೇರನ ಶೈಲಿಯಲ್ಲಿ ಬರೆದ ಸ್ವತಂತ್ರ ಕೃತಿ. 

ಹೋಲ್‍ಬರ್ಗ್ ಯುಗ : 	1700-1750. ಡೇನಿಷ್ ಸಾಹಿತ್ಯ ಚರಿತ್ರೆಯಲ್ಲಿ 18ನೆಯ ಶತಮಾನದ ಪೂರ್ವಾರ್ಧವನ್ನು ಡೇನಿಷ್ ಸಾಹಿತ್ಯದ ಜನಕನಾದ ಯೋಹಾನ್ ಲುಡ್‍ವಿಗ್ ಹೋಲ್‍ಬರ್ಗ್ (1684-1754) ಎಂಬಾತನ ಹೆಸರನ್ನು ಸೇರಿಸಿ ಹೋಲ್‍ಬರ್ಗ್ ಯುಗವೆಂದು ಕರೆಯುತ್ತಾರೆ. ಶೈಲಿಯಲ್ಲಿ ಮೋಲ್‍ಯೇರನನ್ನು ಅನುಸರಿಸಿದರೂ ವಿಷಯದಲ್ಲಿ ರಾಷ್ಟ್ರೀಯವಾದ ಹಾಸ್ಯನಾಟಕಗಳನ್ನು ಬರೆದು ಹೋಲ್‍ಬರ್ಗ್ ಡೇನಿಷ್ ರಂಗಭೂಮಿಗೆ ಅಸ್ತಿಭಾರ ಹಾಕಿಕೊಟ್ಟ. ಯೆಪ್ ಪಾ ಬ್ಯೇರ್ ಗೆಟ್, ಡೆನ್ ಪಾಲಿಟಿಸ್ಕ್ ಕ್ಯಾಂಡಸ್ಟೋಬರ್, ಇರ್ಯಾಸ್ಮಸ್ ಮಾಂಟೇನಸ್ ಎಂಬ ವೈನಿನೋದಿಕಗಳಲ್ಲಿ (ಕಾಮಿಡಿ) ಈತ ಕುಡುಕ ರೈತ, ಹೆಡ್ಡ ರಾಜಕಾರಣಿ ಮತ್ತು ಮೂರ್ಖವಿದ್ಯಾರ್ಥಿಗಳ ಹಾಸ್ಯಾಸ್ಪದ ನಮೂನೆಗಳನ್ನು ಸೃಷ್ಟಿಸಿದ್ದಾನೆ. ಹೋಲ್‍ಬರ್ಗ್ ಡೇನಿಷ್ ಸಾಹಿತ್ಯವನ್ನು ಸತ್ತ್ವಶಾಲಿಯಾಗಿ ಮಾಡಿದ. ಒ. ಜೆ. ಕ್ಯಾಂಬೆಲ್ ಮತ್ತು ಫ್ರೆಡರಿಕ್ ಷೆಂಕ್ 1914ರಲ್ಲಿ ಮೇಲೆ ಹೇಳಿದ ಮೂರು ನಾಟಕಗಳ ಇಂಗ್ಲಿಷ್ ಭಾಷಾಂತರವನ್ನು ಕಾಮಿಡೀಸ್ ಬೈ ಹೋಲ್‍ಬರ್ಗ್ ಎಂಬ ಪುಸ್ತಕದಲ್ಲಿ ಪ್ರಕಟಿಸುವವರೆಗೂ ಈತನೊಬ್ಬ ಉತ್ತಮ ನಾಟಕಕಾರನೆಂಬುದು ಸ್ಕ್ಯಾಂಡಿನೇವಿಯದಿಂದಾಚೆ ತಿಳಿದೇ ಇರಲಿಲ್ಲ. ಆದರೆ ನಿಕೊಲೈ ಕ್ಲಿಮೈ ಐಟರ್ ಸಬ್‍ಟೆರೇನಿಯಮ್ ಎಂಬ ಹೋಲ್‍ಬರ್ಗ್‍ನ ಗದ್ಯವಿಡಂಬನ 1741ರಲ್ಲಿ ಪ್ರಕಟವಾಯಿತು. ಈ ಕೃತಿ ಗಲಿವರ್ಸ್ ಟ್ರಾವಲ್ಸ್ ಎಂಬ ವಿಖ್ಯಾತ ವಿಡಂಬನದಂತೆಯೇ ಇದೆ. 1742ರಲ್ಲೇ, ಪ್ರಕಟವಾದ ಒಂದೇ ವರ್ಷದೊಳಗಾಗಿ, ಈ ವಿಡಂಬನದ ಡೇನಿಷ್ ಮತ್ತು ಇಂಗ್ಲಿಷ್ ಭಾಷಾಂತರಗಳು ಪ್ರಕಟವಾದುವು. ಪೇಪ್ರ ಪಾರ್ಸ್ (1719) ಎಂಬುದು ಹೋಲ್‍ಬರ್ಗನ ಅಣಕ ಮಹಾಕಾವ್ಯ. ಇದರಲ್ಲಿ ಹೋಮರ್ ಮತ್ತು ವರ್ಜಿಲ್ ಕವಿಗಳ ಕ್ಷುದ್ರ ಅನುಕರಣಕಾರರನ್ನು ನಗೆಗೀಡುಮಾಡಲಾಗಿದೆ. ಆದರೆ ಈ ವಿಡಂಬನದಿಂದ ಹೋಲ್‍ಬರ್ಗ್ ಅಧಿಕಾರಿಗಳ ಆಗ್ರಹಕ್ಕೆ ಪಾತ್ರನಾಗುವುದರಲ್ಲಿದ್ದ. ಹೀಗಾಗಿ ಆತ ವಿಡಂಬನ ಬರೆಯುವುದನ್ನೇ ಕೈಬಿಡಬೇಕಾಯಿತು. 1728ರಲ್ಲಿ ಹೋಲ್‍ಬರ್ಗ್ ಕಾವ್ಯ ಬರೆಯುವುದನ್ನು ಬಿಟ್ಟು ಡಾನ್‍ಮಾರ್ಕ್ ರೈಜಿಸ್ ಹಿಸ್ಟರೀ ಎಂಬ ಇತಿಹಾಸಗ್ರಂಥವನ್ನು ಬರೆದ. ಹಾನ್ಸ್ ಗ್ರಾಮ್ ಎಂಬ ಇತಿಹಾಸಕಾರನ ಮೇಲಿನ ಸ್ಪರ್ಧೆಯಿಂದ ಈ ಪುಸ್ತಕ ಬರೆದದ್ದು. ಆಕರಗಳ ಅಧ್ಯಯನದಲ್ಲಿ ಹಾನ್ಸ್ ಗ್ರಾಮ್ ಮೇಲುಗೈಯಾದರೆ, ಲೇಖನಕಲೆಯಲ್ಲಿ ಹೋಲ್‍ಬರ್ಗ್‍ನದು ಮೇಲುಗೈ. ಹೋಲ್‍ಬರ್ಗ್ ಮಾರಲ್ಸ್ಕ್ ಟ್ಯಾನ್ಕರ್ ಮತ್ತು ಎಪಿಸ್ಲರ್ ಎಂಬ ನೀತಿಮೀಮಾಂಸೆಯನ್ನು ಕುರಿತ 500 ಪ್ರಬಂಧಗಳನ್ನು ಬರೆದ. ಇವು ಮಾಂಟೇನ್ ಮತ್ತು ಅಡಿಸನ್ನರ ಪ್ರಬಂಧಗಳನ್ನು ಹೋಲುತ್ತವೆ. ಆದರೆ ಹೋಲ್‍ಬರ್ಗ್ ಯಾವೊಂದು ನಿರ್ದಿಷ್ಟ ತಾತ್ತ್ವಿಕ ಸಿದ್ಧಾಂತವನ್ನೂ ನಿರೂಪಿಸಲಿಲ್ಲ. ಆತ ತನ್ನ ಯುಗದ ಮಧ್ಯಸ್ಥ ಮನೋವೃತ್ತಿಯ ಪ್ರತೀಕ, ಅಷ್ಟೆ. ಇಡೀ ಯುರೋಪನ್ನು ಬಾಲ್ಯದಲ್ಲೇ ಪಾದಚಾರಿಯಾಗಿ ಸಂಚರಿಸಿದ್ದ ಹೋಲ್‍ಬರ್ಗನ ಕೃತಿಗಳಲ್ಲಿ ಒಂದು ಉದಾರವಾದ ಮನೋವೈಶಾಲ್ಯ ಎದ್ದು ಕಾಣುತ್ತದೆ. ಲೈಬ್ನಿಟ್ಸ್, ಅಲೆಕ್ಸಾಂಡರ್ ಪೋಪ್, ಐಸ್ಯಾಕ್ ನ್ಯೂಟನ್, ಜಾನ್ ಲಾಕರ್, ಪಿಯ್ ಬಾಯ್‍ಲ್, ಹ್ಯೂಗೋ, ಗ್ರೋಷಿಯಸ್ ಮುಂತಾದ ಮಹನೀಯರನ್ನೊಳಗೊಂಡ ಆಧುನಿಕ ಯೂರೋಪಿನ ಪರಿಚಯವನ್ನು ತನ್ನ ತಾಯ್ನಾಡಿಗೆ ಮಾಡಿಕೊಟ್ಟದ್ದು ಹೋಲ್‍ಬರ್ಗನ ದೊಡ್ಡ ಕೊಡುಗೆ. 

	17ನೆಯ ಶತಮಾನದ ಅನುಭಾವಿಗಳಲ್ಲಿ ಮೊದಲಿಗೆ ಕಾಣಿಸಿಕೊಂಡ ಧರ್ಮ ಶ್ರದ್ಧೆ ಈಗ ಸಂಪೂರ್ಣವಾಗಿ ವಿಕಾಸಗೊಂಡು ಹಾನ್ಸ್ ಅಡಾಲ್ಫ್ ಬ್ರೋರ್‍ಸನ್ನನ (1694-1764) ಪ್ರಾರ್ಥನಾಗೀತೆಗಳಲ್ಲಿ ಅಭಿವ್ಯಕ್ತವಾಯಿತು. ಟ್ರೇನ್ಸ್ ರೇರ್ ಕ್ಲೆನೊಡೀ (ಧರ್ಮದ ಅಪೂರ್ವ ರತ್ನ) ಮತ್ತು ಸ್ಟ್ಯಾನ್‍ಸಾಂಗ್ (ಹಂಸಗೀತೆ) ಎಂಬ ಸಂಕಲನಗಳಲ್ಲಿ ಪ್ರಕಟವಾಗಿವೆ. ಹೋಲ್‍ಬರ್ಗನಲ್ಲಿಲ್ಲದ ನಿಸರ್ಗಪ್ರೇಮ ಆಂಬ್ರೋಸಿಯಸ್ ಸ್ಟುಬ್ (1705-1758) ಎಂಬವನ ಕವಿತೆಗಳಲ್ಲಿ ಸ್ವಚ್ಛಂದವಾಹಿನಿಯಾಗಿ ಹರಿಯುತ್ತದೆ. 

ಪೋಸ್ಟ್-ಕ್ಲ್ಯಾಸಿಕಲ್ ಮತ್ತು ಪ್ರೀ-ರೊಮ್ಯಾಂಟಿಕ್ ಯುಗ : 1750-1800. 18ನೆಯ ಶತಮಾನ ಪ್ರಬೋಧನ ಯುಗ. ಆ ಶತಮಾನದ ಉದ್ದಕ್ಕೂ ವೈಚಾರಿಕತೆ ಹಾಗೂ ಭಾವುಕತೆಗಳ ನಡುವೆ ಸಾಹಿತ್ಯಕ್ಷೇತ್ರದಲ್ಲಿ ಮೇಲುಗೈಯಾಗಲು ಸ್ಪರ್ಧೆ ನಡೆದಿತ್ತು. ಹೋಲ್‍ಬರ್ಗ್ ತನ್ನ ಕೃತಿಗಳಲ್ಲಿ ಎತ್ತಿ ಹಿಡಿದ ನಾಗರಿಕ ಸದ್ಗುಣಗಳ ಆದರ್ಶಕ್ಕೆ ವಿಶೇಷ ಮಾನ್ಯತೆಯಿದ್ದ ಕಾಲ ಅದು. ಈ ಯುಗದಲ್ಲಿ ರಾಜಕೀಯ ಮತ್ತು ಸಾಹಿತ್ಯ ಸಂಘಗಳು ಎಲ್ಲೆಲ್ಲೂ ಹುಟ್ಟಿಕೊಂಡುವು. ಹಲವು ನಿಯತಕಾಲಿಕೆಗಳು ಆರಂಭವಾದುವು. ಯ ಎನ್ಸ್ ಷೀಲ್ಡ್ರುಪ್ ಸ್ನೀಡಾರ್ಫ್ ಸ್ಥಾಪಿಸಿದ ಪ್ರಗತಿಪರ ನಿಯತಕಾಲಿಕೆ ಡೆನ್ಸ್ ಪೇಟ್ರಿಯಾಟಿಸ್ಕ್ ಟಿಲ್ಸ್‍ಕ್ವಾಯರ್ (ದೇಶಭಕ್ತ ಪ್ರೇಕ್ಷಕ) ಎಂಬ ಪತ್ರಿಕೆ. ಅದರಲ್ಲಿ ರೈತವರ್ಗದ ವಿಮೋಚನೆ, ಗುಲಾಮರ ಮಾರಾಟದ ನಿವಾರಣೆ, ಶಾಲಾ ಸುಧಾರಣೆಗಳು, ಪತ್ರಿಕಾಸ್ವಾತಂತ್ರ್ಯ ಮುಂತಾದ ಅನೇಕ ಪ್ರಸಕ್ತ ವಿಷಯಗಳು ಚರ್ಚಿತವಾಗುತ್ತಿದ್ದುವು. 

	ಆದರೆ ವಿಚಾರ ಮತ್ತು ಭಾವಗಳ ಆವೇಗದಿಂದ ಸಾಹಿತ್ಯದ ಓಜಸ್ಸು ಕಡಿಮೆಯಾಯಿತು. ಇಟಲಿಯ ಆಪೆರ ಮತ್ತು ಫ್ರಾನ್ಸಿನ ಟ್ರ್ಯಾಜೆಡಿಗಳ ಗಂಭೀರ ಶೈಲಿಯ ಅನುಕರಣದಿಂದ ವಾಗಾಡಂಬರದಿಂದಲೂ ದೀರ್ಘಭಾಷಣಗಳಿಂದಲೂ ಕಲುಷಿತವಾದ ಕೃತಿಗಳು ಹುಟ್ಟಿದುವು. ಯೋಹಾನ್ ನೋರ್‍ಡಾಲ್ ಬ್ರುನ್ ಎಂಬುವನ ಟ್ಸಾರಿನ್ ಎಂಬುದು ಇಂಥ ಕೃತಿಗಳಿಗೆ ಒಂದು ನಿದರ್ಶನ. ಇವುಗಳ ನೆನಪು ಉಳಿದಿರುವುದು ಒಂದೇ ಒಂದು ಕಾರಣದಿಂದ. ಅದೆಂದರೆ, ನಾರ್ವೆಯಲ್ಲಿ ಹುಟ್ಟಿದ ಯೋಹಾನ್ ಹರ್ಮನ್ ವೆಸೆಲ್ (1742-1785) ಎಂಬಾತ ಕೀರ್‍ಲೈಡ್ ಊಡೆನ್ ಸ್ಟ್ರೋಂಪರ್ ಎಂಬ ತನ್ನ ಅಣಕ ಟ್ರ್ಯಾಜೆಡಿಯಲ್ಲಿ ಇಂಥ ಕೃತಿಗಳನ್ನು ಹಾಸ್ಯಾಸ್ಪದಗೊಳಿಸಿದ್ದು, ಪದ್ಯಶೈಲಿಯಲ್ಲಿ ಬರೆದ ಕೆಲವು ಹಾಸ್ಯಮಯ ಕಥೆಗಳು, ಹಲವಾರು ತೀಕ್ಷ್ಣವಾದ ಹಾಸ್ಯೋಕ್ತಿಗಳು ಸ್ಟ್ರೋಂಪರನ ಅಣಕದಲ್ಲಿವೆ. ಈ ಕೃತಿ ಪೋಸ್ಟ್-ಕ್ಲ್ಯಾಸಿಕಲ್ ಯುಗದ ಅತ್ಯುತ್ತಮ ಫಲವೆನ್ನಬಹುದು. 

	ಕ್ರಿಶ್ಚನ್ ಬ್ರೌಮನ್ ಟುಲ್ಲಿನ್ (1728-1735) ಎಂಬಾತ ರೂಸೋ ಮತ್ತು ಅಲೆಕ್ಸಾಂಡರ್ ಪೋಪರನ್ನು ಅನುಸರಿಸಿ ನೀತಿಬೋಧಕ ಪದ್ಯಗಳನ್ನೂ ಜೇಮ್ಸ್ ತಾಮ್ಸನ್ನನ ದಿ ಸೀಸನ್ಸ್ ಎಂಬ ಕವಿತೆಯನ್ನನುಸರಿಸಿ ಪ್ರಕೃತಿವರ್ಣನೆಗಳಿಂದ ಕೂಡಿದ ಕವಿತೆಗಳನ್ನೂ ಬರೆದ. ಆದರೆ ಈ ಕಾಲದ ಕವಿಗಳೆಲ್ಲರನ್ನೂ ಮೀರಿಸಿದವ ಯೋಹಾನ್ಸ್ ಈವಾಲ್ಡ್ (1743-1781) ಎಂಬಾತ. ಡೆನ್‍ಮಾರ್ಕಿನ ರಾಷ್ಟ್ರಗೀತೆಯಾದ ಕಿಂಗ್, ಕ್ರಿಶ್ಚನ್ ಎಂಬುದನ್ನು ಬರೆದವ ಈತನೇ. ಈ ಶತಮಾನದಲ್ಲಿ ಇವನೇ ಅತ್ಯಂತ ಪ್ರತಿಭಾಶಾಲಿಯಾದ ಕವಿ. ಈತನ ತಂದೆ ಒಬ್ಬ ಪಾದ್ರಿ. ಹೀಗಾಗಿ ಧರ್ಮಶ್ರದ್ಧೆ ಇವನಿಗೆ ಪಿತೃಪ್ರಾಪ್ತವಾದದ್ದು. ಬುದ್ಧಿಯಲ್ಲಿ ಪ್ರಬೋಧನ ಯುಗಕ್ಕೂ ಭಾವದಲ್ಲಿ ಎಫ್. ಜಿ. ಕ್ಲಾಪ್‍ಸ್ಟಾಕ್‍ನಿಂದ ಉಪಕ್ರಮಗೊಂಡ ಜರ್ಮನ್ ನವೋದಯಕ್ಕೂ ಸೇರಿದವ ಈತ. ಈತನಿಂದ ಪ್ರೀ-ರೊಮ್ಯಾಂಟಿಕ್ ಯುಗ ಡೆನ್‍ಮಾರ್ಕಿನಲ್ಲಿ ತಲೆದೋರಿತು. ತನ್ನ ನಾಟಕದಲ್ಲಿ ಈತ ಫ್ರೆಂಚ್ ಕ್ಲಾಸಿಕ್ ಮಾರ್ಗವನ್ನು ಬಿಟ್ಟು ಷೇಕ್ಸ್‍ಪಿಯರ್, ಮಿಲ್ಟನ್, ಆಸಿಯನ್, ಲಾವಣಿಗಳು ಮತ್ತು ನಾರ್ಡಿಕ್ ದಂತಕಥೆಗಳು-ಇವುಗಳ ಅಂಶವನ್ನು ಅಳವಡಿಸಿಕೊಂಡ. ಈತನ ಭಾವಗೀತಾತ್ಮಕವಾದ ಓಡುಗಳಲ್ಲಿ ರೊಮ್ಯಾಂಟಿಕ್ ಯುಗದ ಕರುಣರಸ ಉಕ್ಕಿ ಹರಿಯುತ್ತದೆ. ಈವಾಲ್ಡನ ಅನಂತರ ಜರ್ಮನ್ ಮಾದರಿಯನ್ನನುಸರಿಸಿದ ಅನೇಕ ಟ್ರ್ಯಾಜೆಡಿಗಳು ಕಾಮಿಡಿಗಳೂ ಹುಟ್ಟಿದುವು. ಓಲಫ್ ಕ್ರಿಶ್ಚನ್ ಓಲಫ್‍ಸನ್ (1763-1827) ಎಂಬಾತನ ಗುಲ್ಡಾಸನ್ (ಸುವರ್ಣ ಸಂಪುಟ) ಎಂಬ ಒಂದು ಕಾಮಿಡಿಯ ಹೊರತು ಉಳಿದವೆಲ್ಲ ತೀರ ಸಾಮಾನ್ಯಮಟ್ಟದವು. ಪೀಟರ್ ಆಂಡ್ರಿಯಾಸ್ ಹೈಬರ್ಗ್ ಎಂಬಾತನಿಗೆ ಹೆಚ್ಚು ಗೌರವ ಸಲ್ಲಬೇಕಾಗುತ್ತದೆ. ತನ್ನ ಕಾಮಿಡಿಗಳಲ್ಲೂ ವಿಡಂಬನಗಳಲ್ಲೂ ಈತ ಹೋಲ್‍ಬರ್ಗನ ಮಾರ್ಗವನ್ನನುಸರಿದ. ಆದರೆ ಈತನನ್ನು 1800ರಲ್ಲಿ ದೇಶಭ್ರಷ್ಟನನ್ನಾಗಿ ಮಾಡಲಾಯಿತು. ಕಾವ್ಯದ ಪರಂಪರೆಯನ್ನು 19ನೆಯ ಶತಮಾನಕ್ಕೆ ಒಯ್ದ ಪ್ರತಿಭಾನ್ವಿತ ಕವಿಯೆಂದರೆ ಯೆನ್ಸ್ ಬ್ಯಾಗೆಸನ್ (1764-1826). ತನ್ನ ಹಾಸ್ಯಮಯ ಕಥೆಗಳು ಹಾಗೂ ಭಾವಪೂರ್ಣವಾದ ಪ್ರವಾಸ ಗ್ರಂಥಗಳಲ್ಲಿ ಈತ ಹೋಲ್‍ಬರ್ಗ್ ಮತ್ತು ವೆಸ್ಸೆಲ್ಲರ ಹಾಸ್ಯವನ್ನೂ ಈವಾಲ್ಡನ ಹಾಗೂ ಮುಂದಿನ ರೊಮ್ಯಾಂಟಿಕ್ ಯುಗದ ಕಲ್ಪನಾವಿಲಾಸವನ್ನೂ ಪ್ರದರ್ಶಿಸುತ್ತಾನೆ. 

ರೊಮ್ಯಾಂಟಿಕ್ ಯುಗ : 	1800-1870. ಡೇನಿಷ್ ಸಾಹಿತ್ಯದಲ್ಲಿ ಈವಾಲ್ಡ್ ಮತ್ತು ಬ್ಯಾಗೆಸನ್ ರೊಮ್ಯಾಂಟಿಕ್ ಯುಗದ ಪ್ರವರ್ತಕರು. ಕೋಪೆನ್‍ಹೇಗೆನ್ ನಗರದ ತತ್ತ್ವಶಾಸ್ತ್ರಜ್ಞ ಹೆನ್ರಿಕ್ ಸ್ಟೀಫನ್ಸ್ 1802ರಲ್ಲಿ ನೀಡಿದ ಭಾಷಣಗಳಿಂದಲೂ ಗಯಟೆ, ಷಿಲ್ಲರ್ ಮತ್ತು ಯೇನಾ ನಗರದ ರೊಮ್ಯಾಂಟಿಕ್ ಕವಿಗಳ ಉದಯದಿಂದಲೂ ಕಾಂಟ್ ಮತ್ತು ಷೆಲ್ಲಿಂಗ್ ಎಂಬ ಜರ್ಮನ್ ತತ್ತ್ವಜ್ಞರ ಸಿದ್ಧಾಂತಗಳಿಂದಲೂ ದೊರೆತ ಸ್ಫೂರ್ತಿಯಿಂದ ಡೆನ್‍ಮಾರ್ಕಿನಲ್ಲಿ ರೊಮ್ಯಾಂಟಿಕ್ ಯುಗದ ಉದಯವಾಯಿತು. ರೊಮ್ಯಾಂಟಿಕ್ ಯುಗವೇ ಡೇನಿಷ್ ಸಾಹಿತ್ಯದ ಸುವರ್ಣಯುಗ. ಆಡಮ್ ಓಲೆನ್‍ಷ್ಲಾಜರ್ (1778-1850) ಎಂಬ ಪ್ರತಿಭಾಶಾಲಿಯಾದ ತರುಣ ಈ ಯುಗದ ಅಗ್ರಗಾಮಿ ಕವಿ. ಗುಲ್ಡ್‍ಹಾರ್ನನ್ (1802) ಎಂಬ ಈತನ ಪದ್ಯದಲ್ಲಿ ರೊಮ್ಯಾಂಟಿಕ್ ಮನೋಧರ್ಮ ಅದ್ಭುತವಾಗಿ ವ್ಯಕ್ತಗೊಂಡಿದೆ. ಸ್ಯಾಂಕ್ಟ್ ಹ್ಯಾನ್ಸಾಫ್ಟನ್ ಸ್ಪಿಲ್ (1803) ಎಂಬ ಕಾವ್ಯಾತ್ಮಕ ವಿಡಂಬನದಲ್ಲಿ 18ನೆಯ ಶತಮಾನದ ವೈಚಾರಿಕತೆಯನ್ನು ಈತ ಅಣಕಿಸಿದ್ದಾನೆ. ಅಲಾಡಿನ್ (1805) ಎಂಬ ಭಾವಗೀತಾತ್ಮಕ ನಾಟಕದಲ್ಲಿ ಭಾಗ್ಯಶಾಲಿಯಾದ ನಾಯಕ ಕವಿಯ ಪ್ರತಿಭೆಯ ಪ್ರತೀಕವಷ್ಟೇ ಅಲ್ಲದೆ ರೊಮ್ಯಾಂಟಿಕ್ ಕ್ರಾಂತಿಯ ಅಂತಸ್ಸತ್ತ್ವದ ಪ್ರತೀಕವೂ ಆಗಿದ್ದಾನೆ. 

ಹೇಕೆನ್‍ಯಾರ್ಲ್ (1807) ಎಂಬ ಓಜಸ್ವಿಯಾದ ಟ್ರ್ಯಾಜೆಡಿಯಲ್ಲಿ ನಾರ್ಡಿಕ್ ಕಾವ್ಯ ತನ್ನ ಪರಾಕಾಷ್ಠೆಯನ್ನೇ ಮುಟ್ಟಿದೆ. ಇದಾದ ಮೇಲೆ ಈತ ಬರೆದ ನಾಟಕಗಳ ಸಾಲಿನಲ್ಲಿ ಯಾವುದೂ ಅಷ್ಟೇನೂ ಸತ್ತ್ವಶಾಲಿಯಾದದ್ದಲ್ಲ. ಆದರೆ ಅದೇ ಕಾಲದಲ್ಲಿ ಈತ ಬರೆದ ಭಾವಗೀತೆಗಳು ಭಾವ ಹಾಗೂ ಭಾವನಾಪೂರ್ಣವಾಗಿದೆ. ಡರ್ ಎರ್ ಎಟ್ ಇಂಡೈಟ್ ಲ್ಯಾಂಡ್ (ಚೆಲುವ ನಾಡೊಂದುಂಟು) ಎಂಬ ದೇಶಭಕ್ತಿ ಗೀತೆ ತುಂಬ ವಿಖ್ಯಾತವಾದದ್ದು. 1829ರಲ್ಲಿ ಓಲೆನ್‍ಷ್ಲಾಜರನಿಗೆ ಲುಂಡ್ ನಗರದಲ್ಲಿ ಕಿರೀಟಧಾರಣ ಮಾಡಿ ನಾರ್ಡಿಕ್ ಕವಿರಾಜ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಈತನ ಕೃತಿಗಳು ಭಾಷಾಂತರವಾಗಿದ್ದರೂ ಸ್ಕ್ಯಾಂಡಿನೇವಿಯದಿಂದಾಚೆ ಈತನಿಗೆ ಸಾಕಷ್ಟು ಮನ್ನಣೆ ದೊರೆತಿಲ್ಲದಿರುವುದು ಸೋಜಿಗದ ಸಂಗತಿ. 

	ಬರ್ನ್‍ಹಾರ್ಡ್ ಸೆವರಿನ್ ಇಂಗ್‍ಮನ್ (1789-1862) ಎಂಬಾತನ ಮಾರ್ಗೆನ್ ಓಕ್ ಆಫ್ಟನ್ ಸಾಂಗ್ ಎಂಬ ಕವನಸಂಗ್ರಹ ಜನಪ್ರಿಯವಾದದ್ದು. ಡೆನ್‍ಮಾರ್ಕ್ ಇಂಗ್ಲೆಂಡಿನೊಡನೆ ನಡೆಸಿದ ಯುದ್ಧದಲ್ಲಿ 1801, 1807ರಲ್ಲಿ ಸೋಲುಗಳನ್ನನುಭವಿಸಿ ಕಡೆಗೆ 1814ರಲ್ಲಿ ನಾರ್ವೆಯನ್ನು ಕಳೆದುಕೊಂಡಿತು. ಈ ಘಟನೆಗಳಿಂದ ನಿಸ್ತೇಜನಗೊಂಡಿದ್ದ ತಾಯ್ನಾಡಿನಲ್ಲಿ ಇಂಗ್‍ಮೆನ್ ತನ್ನ ಐತಿಹಾಸಿಕ ಕಾದಂಬರಿಗಳಿಂದ ರಾಷ್ಟ್ರೀಯ ಸ್ವಾಭಿಮಾನವನ್ನು ಜಾಗೃತಗೊಳಿಸಿ ಡೇನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ. ಯೋಹಾನ್ಸ್ ಕಾಸ್ರ್ಟನ್ ಹಾಂಕ್ (1790-1872) ಪೌರುಷಮಯವೂ ಉದಾತ್ತವೂ ಆದ ಭಾವಗೀತೆಗಳನ್ನು ಬರೆದ.

	ಆದರೆ ಈ ಕಾಲದ ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿ ಎಂದರೆ ನಿಕೋಲೈ ಫ್ರೆಡರಿಕ್ ಸೆವೆರೀನ್ ಗ್ರುಂಟ್‍ವಿಗ್ (1783-1872) ಎಂಬಾತ. ಈತ ಪ್ರಾರ್ಥನಾ ಗೀತಕಾರ. ಧರ್ಮೋಪದೇಶಕ ಹಾಗೂ ಶಿಕ್ಷಣಪಟು. ಈತನ ಉಜ್ವಲ ಪ್ರಾರ್ಥನಾ ಗೀತೆಗಳಿಂದ ಡೆನ್‍ಮಾರ್ಕಿನ ಚರ್ಚುಗಳಲ್ಲಿ ಈತನಿಗೆ ಅಗ್ರಸ್ಥಾನ ದೊರೆತಿತ್ತು. ಈತನ ಪ್ರಭಾವಕ್ಕೆ ಮುಖ್ಯ ಕಾರಣ ಈತ ಬೋಧಿಸಿದ ಶಿಕ್ಷಣ ತತ್ತ್ವ. ಶಿಕ್ಷಣ ಪುಸ್ತಕ ಪಾಠಕ್ಕಾಗಿ ಅಲ್ಲ, ಬದುಕಿಗಾಗಿ ಎಂದು ಈತ ಒತ್ತಿ ಹೇಳಿದ. ಈತನ ಸ್ಫೂರ್ತಿಯಿಂದಲೇ ಡೆನ್‍ಮಾರ್ಕಿನ ಸುಪ್ರಸಿದ್ಧ ಜನತಾ ಶಾಲಾ (ಫೋಕ್ ಸ್ಕೂಲು) ಚಳವಳಿ ಹುಟ್ಟಿದ್ದು. 

	1825ರ ತರುವಾಯ ಪ್ರಾಮುಖ್ಯ ಗಳಿಸಿದ ತರುಣ ರೊಮ್ಯಾಂಟಿಕರಲ್ಲಿ ಯೋಹಾನ್ ಲುಡ್‍ವಿಗ್ ಹೈಬರ್ಗ್ (1791-1860) ಎಂಬಾತನೇ ಅತ್ಯಂತ ವರ್ಚಸ್ವಿ. ಹೇಗಲನ ಸಿದ್ಧಾಂತವನ್ನು ಡೇನಿಷ್ ಸಾಹಿತ್ಯಕ್ಕೆ ತಂದವ ಈತನೇ. ಓಲೆನ್‍ಷ್ಲಾಜರನ ಕಲೆಯಲ್ಲಿ ನಯಗಾರಿಕೆ ಸಾಲದೆಂದು ಹೈಬರ್ಗ್ ಆತನನ್ನು ಟೀಕಿಸಿದ. ನೃತ್ಯಗೀತಗಳನ್ನೊಳಗೊಂಡ ತನ್ನ ವಾದ್‍ವಿಲ್‍ಗಳಲ್ಲಿ (ಲಘುನಾಟಿಕೆಗಳು) ಮತ್ತು ತನ್ನ ರೊಮ್ಯಾಂಟಿಕ್ ನಾಟಕಗಳಲ್ಲಿ ಈತ ಕಾವ್ಯದ ವಿವಿಧ ಪ್ರಕಾರಳಿಗೆ ಪರಿಷ್ಕøತ ರೂಪ ಅತ್ಯಗತ್ಯವೆಂದು ಒತ್ತಿ ಹೇಳಿದ. ಎಲ್ವರ್ ಹೋಯ್ (ಎಲ್ವರನ ಬೆಟ್ಟ) ಎಂಬ ಈತನ ರೊಮ್ಯಾಂಟಿಕ್ ನಾಟಕದಲ್ಲಿ ಪ್ರೇಮ, ಜನತೆಯ ಸಂಪ್ರದಾಯಗಳು ಮತ್ತು ರಾಜಭಕ್ತಿಗಳಿಗೆ ಪೂಜ್ಯತೆ ಕೊಟ್ಟಿರುವುದರಿಂದ ಈ ನಾಟಕವನ್ನು ರಾಷ್ಟ್ರೀಯ ಉತ್ಸವಗಳಲ್ಲಿ ರಾಷ್ಟ್ರೀಯ ನಾಟಕವನ್ನಾಗಿ ಇಂದಿಗೂ ಪ್ರದರ್ಶಿಸುತ್ತಾರೆ. ಹೈಬರ್ಗ್ ತೋರಿದ ಕಲಾವಂತಿಕೆ ಹೆನ್ರಿಕ್ ಹಟ್ರ್ಸ್ (1798-1870) ಎಂಬುವನ ಅಸಂಖ್ಯಾತ ರೊಮ್ಯಾಂಟಿಕ್ ನಾಟಕಗಳಲ್ಲೂ ಕೋಪೆನ್ ಹೇಗೆನ್ ಕಾಮಿಡಿಗಳಲ್ಲೂ ಕಂಡುಬರುತ್ತದೆ. ಈ ಕಾಮಿಡಿಗಳಲ್ಲಿ ನಾಯಿಕೆಯ ಪಾತ್ರವನ್ನು ಹೈಬರ್ಗನ ಪತ್ನಿಯಾದ ಯೋಹಾನ್ ಲೂಯಿಸೆ ಹೈಬರ್ಗಳಿಗೆ (1812-1890) ಕೊಡಲಾಗುತ್ತಿತ್ತು. ಈಕೆ ಡೆನ್‍ಮಾರ್ಕಿನ ಶ್ರೇಷ್ಠತಮನಟಿ ಅಲ್ಲದೆ ಈಕೆ ತುಂಬ ಸ್ವಾರಸ್ಯಮಯವಾದ ಮೆಮ್ವಾರ್ ಲೇಖಕಿಯೂ ಹೌದು. 

	ವಾದ್‍ವಿಲ್‍ಗಳು ವಾಸ್ತವಿಕವಾಗಿರಬೇಕೆಂಬ ಒತ್ತಾಯ ಹೆಚ್ಚುತ್ತಿದ್ದುದರಿಂದ ಅವುಗಳಲ್ಲಿ ಪರಿಸರ ಚಿತ್ರಣ ಕೊಡುವ ಪದ್ಧತಿ ಬಳಕೆಗೆ ಬಂತು. ಡೆನ್ಮಾರ್ಕಿನ ನೈಸರ್ಗಿಕ ದೃಶ್ಯಗಳನ್ನೂ ವಿದ್ಯಾರ್ಥಿಗಳನ್ನೂ ಚಿತ್ರಿಸುವುದರಲ್ಲಿ ಸಿದ್ಧಹಸ್ತನಾದ ಪಾಲ್ ಮೋಲರ್ (1794-1838) ಎಂಬುವನಿಗೆ ಪರಿಸರ ಚಿತ್ರಣ ಲೀಲಾಜಾಲವಾಗಿತ್ತು. ತನ್ನ ವಾದ್‍ವಿಲ್‍ಗಳಲ್ಲಿ ಈತ ವಿದ್ಯಾರ್ಥಿಗಳನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾನೆ. ಸ್ಟೀನ್ ಸ್ಟೀನ್‍ಸನ್ ಬ್ಲಿಕರ್ (1782-1848) ಎಂಬ ಪಾದ್ರಿ ಬರೆದ, ಹೃದಯವನ್ನು ಕಲಕುವ ಪದ್ಯಗಳಲ್ಲೂ ಸಣ್ಣ ಕಥೆಗಳಲ್ಲೂ ವಾಸ್ತವಿಕತೆ ಇನ್ನೂ ಚೆನ್ನಾಗಿ ಕಂಡುಬರುತ್ತದೆ. ಜಟ್‍ಲಂಡಿನ ಬರಡುನಾಡಿನ ರೈತರ ಕ್ಲೇಶಕರವಾದ ಜೀವನವನ್ನು ಈತ ಹೃದಯಂಗಮವಾಗಿ ವರ್ಣಿಸಿದ್ದಾನೆ. ಕ್ರಿಶ್ಚನ್ ವಿನ್ತರ್ (1796-1876) ಎಂಬಾತ ಜೀಲಂಡಿನ ಗ್ರಾಮಾಂತರ ಪ್ರದೇಶದ ಸೌಂದರ್ಯವನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾನೆ. ಲುಡ್‍ವಿಗ್ ಬೋಚರ್ (1793-1874) ಮತ್ತು ಎಮೀಲ್ ಆರ್‍ಸ್ಟ್ರುಪ್ (1800-1856) ಎಂಬುವರೂ 
ನಿಸರ್ಗಸೌಂದರ್ಯಪ್ರೇಮಿಗಳು. ಆದರೆ ಫ್ರೆಡರಿಕ್ ಪಾಲುಡನ್ ಮ್ಯೂಲರ್ (1809-1876) ಉಪದೇಶಪ್ರಿಯ. ಭಾವಗೀತೆಗಳನ್ನು ಬರೆದ ಕವಿಗಳಲ್ಲಿ ಅಗ್ರಗಣ್ಯನಾದ ಈತ ಆ್ಯಡಮ್ ಹೋಮೋ ಎಂಬ ಪದ್ಯರೂಪದ ಕಾದಂಬರಿಯಲ್ಲಿ ಸಮಾಜದ ಅಂತಸ್ತು, ಗೌರವಗಳಿಗಾಗಿ ಜನ ನಡೆಸುವ ಕ್ಷುಲ್ಲಕವಾದ ಹೋರಾಟವನ್ನು ತೀವ್ರವಾಗಿ ಖಂಡಿಸಿದ. ಬೈರನ್ ಕವಿ ಬಳಸಿದ ಅಟಾವಾ ರೈಮ ಎಂಬ ಛಂದಸ್ಸಿನಲ್ಲಿ ಬರೆದಿರುವ ಈ ಕೃತಿ ಆ ಕಾಲದ ಉಜ್ಜ್ವಲ ಚಿತ್ರವನ್ನು ಕೊಡುತ್ತದೆ. 

	ಡೆನ್‍ಮಾರ್ಕಿನ ಸುವರ್ಣಯುಗಕ್ಕೆ ಸೇರಿದ ಇಬ್ಬರು ಲೇಖಕರಿಗೆ ಮಾತ್ರವೇ ಅಂತರರಾಷ್ಟೀಯ ಖ್ಯಾತಿ ದೊರೆಯಿತು. ತುಂಬ ಪ್ರತಿಭಾನ್ವಿತನಾದ ಹಾನ್ಸ್ ಕ್ರಿಶ್ಚನ್ ಅಂಡರ್ಸನ್ (1805-1875) ಇವರಲ್ಲೊಬ್ಬ. ಈತನ ಕಿನ್ನರ ಕಥೆಗಳ ಮೊದಲ ಸಂಗ್ರಹ ಪ್ರಕಟವಾದದ್ದು 1835ರಲ್ಲಿ. ಈ ಕಥೆಗಳಲ್ಲಿ ಅಡಗಿರುವ ವ್ಯಂಗ್ಯ ವಿಡಂಬನಗಳು ವಿದೇಶೀಯರಿಗೆ ಇನ್ನೂ ಚೆನ್ನಾಗಿ ಅರ್ಥವಾಗಿಲ್ಲ. ಅತ್ಯುತ್ತಮ ಭಾಷಾಂತರದಲ್ಲೂ ಮೂಲಕೃತಿಗೆ ಆಗುವ ನಷ್ಟ ಅಷ್ಟು ದೊಡ್ಡದು. ಸೋರೆನ್ ಕರ್ಕ್‍ಗಾರ್ಡ್ (1813-1855) ಎಂಬ ತತ್ತ್ವe್ಞÁನಿ ಇನ್ನೊಬ್ಬ ಅಂತರರಾಷ್ಟ್ರೀಯ ಖ್ಯಾತಿ ಪಡೆದವ. ಈತ ಅಸ್ತಿತ್ವವಾದಿ. ಪಾಪ ಭೀತಿ ಮತ್ತು ಆತ್ಮಶೋಧನೆಗಳ ಮೂಲಕ ಸೌಂದರ್ಯೋಪಾಸಕ ಹಂತದಿಂದ ನೈತಿಕ ಮತ್ತು ಧಾರ್ಮಿಕ ಉನ್ನತಿಯನ್ನು ಸಾಧಿಸುವುದು ವ್ಯಕ್ತಿಯ ಕೈಯಲ್ಲೇ ಇದೆ ಎಂಬುದು ಈತನ ಸಿದ್ಧಾಂತ. 1930-40ರ ದಶಕದ ವರೆಗೂ ಇತನ ಹೆಸರು ವಿದೇಶೀಯರಿಗೆ ತಿಳಿದೇ ಇರಲಿಲ್ಲ. ಆದರೆ ಆ ದಶಕದಲ್ಲಿ ಇದ್ದಕ್ಕಿದ್ದಂತೆ ಈತನ ಸಿದ್ಧಾಂತ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಹಲವೆಡೆಗಳಲ್ಲಿ ಚರ್ಚೆ ಹಾಗೂ ವ್ಯಾಖ್ಯಾನಗಳ ವಿಷಯವಾಯಿತು. 

	ಯುದ್ಧದಲ್ಲಿ ಸೋತು ಅವನತಿಯ ದಾರಿಯನ್ನು ಹಿಡಿದಿದ್ದ ಕಾಲದಲ್ಲಿ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಲ್ಲಿ ಆಸಕ್ತಿ ಕುಂಠಿತವಾಗಿತ್ತು. ರೊಮ್ಯಾಂಟಿಕ್ ಯುಗದ ಕೊನೆಯಲ್ಲಿ ಅದು ಪುನಃ ಜಾಗ್ರತವಾಯಿತು. 1840ರಿಂದಾಚೆಗೆ ಪ್ರಜಾಸತ್ತೆಯಲ್ಲಿ ನಂಬಿಕೆಯುಳ್ಳ ಕೆಲವು ಉದಾರವಾದಿಗಳು ಪ್ರಾಮುಖ್ಯಕ್ಕೆ ಬಂದರು. ಇವರೆಲ್ಲ ವಿಶ್ವವಿದ್ಯಾಲಯಗಳಿಗೆ ಸೇರಿದವರು. ಮೈಯರ್ ಗೋಲ್ಡ್‍ಶ್ಮಿಟ್ (1819-1887) ತನ್ನ ಕಾರ್ಸೇರನ್ (ನೀರ್ಗಳ್ಳ) ಎಂಬ ಹಾಸ್ಯಪತ್ರಿಕೆಯಲ್ಲಿ ನಿರಂಕುಶ ಪ್ರಭುತ್ವಕ್ಕೆ ಕೊಡಲಿಪೆಟ್ಟು ಹಾಕಿದ. ಕಾರ್ಲ್ ಪ್ಲೌಗ್ (1813-1894) ಜರ್ಮನರು ಡೆನ್‍ಮಾರ್ಕಿನ ಮೇಲೆ ಹೇರುತ್ತಿರುವ ಒತ್ತಡಕ್ಕೆ ಅಂತರ-ಸ್ಕ್ಯಾಂಡಿನೇವಿಯನ್ ವಿದ್ಯಾರ್ಥಿಚಳವಳಿಯೇ ಸೂಕ್ತಪರಿಹಾರವೆಂದು ತನ್ನ ಕವಿತೆಗಳಲ್ಲಿ ಉಪದೇಶಿಸಿದ. ಅಲ್ಲದೆ, ನಿರಂಕುಶ ಪ್ರಭುತ್ವವನ್ನು ಕೊನೆಗಾಣಿಸಿದ 1849ರ ಸಂವಿಧಾನವನ್ನು ಮುಕ್ತಕಂಠದಿಂದ ಪ್ರಶಂಸಿಸಿದ. ಯೆನ್ ಕ್ರಿಶ್ಚನ್ ಹೊಸ್ಪ್ರಪ್ (1818-1892) ರಂಗಭೂಮಿಯಲ್ಲಿ ಹೈಬರ್ಗನ ಸಂಪ್ರದಾಯವನ್ನು ಅವನ ನಾಟಕಗಳನ್ನೂ ಮೀರಿಸಿದ ಹಾಸ್ಯನಾಟಕಗಳಿಂದ ಬೆಳಗಿಸಿದ. ಗೋಲ್ಡ್‍ಶ್ಮಿಟ್ ತನ್ನ ಕಾದಂಬರಿಗಳಲ್ಲಿ ಯೆಹೂದ್ಯರ ಪರಿಸರವನ್ನು ಚಿತ್ರಿಸಿ ಅನೇಕ ಯೆಹೂದ್ಯ ಪಾತ್ರಗಳನ್ನು ಸೃಷ್ಟಿಸಿದ. ಹಾನ್ಸ್ ವಿಲ್‍ಹೆಲ್ಮ್ ಕಾಲುಂಡ್ (1818-1885) ಮತ್ತು ಅನ್ರ್ಸ್‍ಟ್ ಕ್ರಿಶ್ಚನ್ ರಿಕಾರ್ಟ್ (1831-1892) ಎಂಬುವರು ಈ ಕಾಲದ ಸಾಮಾನ್ಯ ಕವಿಗಳು. ಪಾಂಟಾಸ್ಟರ್ನ್ (ಭ್ರಾಂತಿ ವಿಕ್ಯಿಗಳು, 1857) ಎಂಬ ಕಾದಂಬರಿಯಲ್ಲಿ ಹಾನ್ಸ್ ಎಗೆಡ್ ಷಾಕ್ (1820-1859) ರೊಮ್ಯಾಂಟಿಕರ ಕಾಲ್ಪನಿಕ ಪ್ರಪಂಚವನ್ನೂ ಅವರ ಹಗಲುಗನಸುಗಳನ್ನೂ ಹೀಗಳೆದಾಗ ಹೊಸ ಯುಗವೆಂದೂ ಉದಯವಾಯಿತು. 

ಯಥಾರ್ಥತಾವಾದದ ಯುಗ : 1870-1900. ಜಾರ್ಜ್ ಬ್ರಾಂಡಿಸ್ (1842-1927) ಎಂಬಾತ ಈ ಹೊಸ ಯುಗದ ಪ್ರವರ್ತಕ. ಈತ ಅಂತರರಾಷ್ಟ್ರೀಯ ಖ್ಯಾತಿಪಡೆದ ವಿಮರ್ಶಕ. 1871ರಲ್ಲಿ ಕೋಪೆನ್‍ಹೇಗೆನ್ನಿನಲ್ಲಿ ಈತ ಮಾಡಿದ ಉಪನ್ಯಾಸಗಳಿಂದ ಕೋಲಾಹಲಕರ ಪರಿಣಾಮ ಉಂಟಾಯಿತು. 1864ರಲ್ಲಿ ಪ್ರಷ್ಯ ಮತ್ತು ಆಸ್ಟ್ರಿಯಗಳಿಂದ ಪರಾಭವಗೊಂಡ ಮೇಲೆ ಇಳಿಮುಖವಾಗಿದ್ದ ಡೇನಿಷ್ ಸಂಸ್ಕøತಿಯನ್ನು ಪುನರುಜ್ಜೀವನಗೊಳಿಸಲು ಆಧುನಿಕ ಯೂರೋಪಿನಿಂದ ಸರ್ವತೋಮುಖವಾಗಿ ಸ್ಫೂರ್ತಿಯನ್ನು ಪಡೆಯಬೇಕೆಂದು ತನ್ನನ ದೇಶಬಾಂಧವರಿಗೆ ಬ್ರಾಂಡಿಸ್ ಕರೆಯಿತ್ತ. ಸಾಹಿತ್ಯಕ್ಷೇತ್ರದಲ್ಲಿ ವಿಖ್ಯಾತ ಫ್ರೆಂಚ್ ವಿಮರ್ಶಕರಾದ ಹಿಪ್ಪೊಲೈಟ್ ಟೇನ್ ಹಾಗೂ ಸಿ.ಎ. ಸೇಂಟ್ ಬವ್ ಅವರಿಂದಲೂ ಸಾಮಾಜಿಕ ಸಿದ್ಧಾಂತಗಳ ವಿಷಯದಲ್ಲಿ ಇಂಗ್ಲೆಂಡಿನ ವಿಖ್ಯಾತ ಚಿಂತಕನಾದ ಜಾನ್ ಸ್ಟೂಯರ್ಟ್ ಮಿಲ್‍ನ ಲೇಖನಗಳು ಹಾಗೂ 1871ರ ಪ್ಯಾರಿಸ್ ಕಾಮ್ಯೂನ್‍ಗಳಿಂದಲೂ ತಾತ್ತ್ವಿಕ ಚಿಂತನದಲ್ಲಿ ಆಗಸ್ಟ ಕಾಂಟ್ ಹಾಗೂ ಎಲ್. ಎ. ಫೈಯರ್‍ಬಾಕ್ ಅವರಿಂದಲೂ ಪ್ರಭಾವಿತನಾದ ಬ್ರಾಂಡಿಸ್ ಡೇನಿಷ್ ಸಾಹಿತ್ಯ ವಾಸ್ತವತೆಗಳನ್ನು ಕುರಿತು ಬರೆಯಬೇಕೆಂದು ಒತ್ತಾಯಪಡಿಸಿದ. ಹೋಲ್ಗರ್ ಡ್ರಾಕ್‍ಮನ್ (1846-1908), ಯೆನ್ಸ್ ಪೀಟರ್ ಯಾಕಬ್‍ಸನ್ (1847-1885), ನಾರ್ವೆಯ ಹೆನ್ರಿಕ್ ಇಬ್ಸೆನ್, ಬ್ಯೋರ್ನ್‍ಸ್ಟಿಯರ್ನ್ ಬ್ಯೋರ್ನ್‍ಸನ್ ಮತ್ತು ಸ್ವೀಡನ್ನಿನ ಅಗಸ್ಟ ಸ್ಟ್ರಿನ್ಡೆನ್‍ಬರ್ಗ್ ಇವರೆಲ್ಲ ಬ್ರಾಂಡಿಸ್ಸನ ಕರೆಯನ್ನು ಸಮರ್ಥಿಸಿದರು. ಈತನ ತಮ್ಮ ಎಡ್ವರ್ಡ್ ಬ್ರಾಂಡಿಸ್ ತನ್ನ ಡೆಟ್ ಮಾಡರ್ನ್ ಗೆನ್ನೆಮ್‍ಬ್ರಂಡ್ಸ್ ಮೀಂಡ್ ಎಂಬ ಗ್ರಂಥದಲ್ಲಿ ಯಥಾರ್ಥತಾವಾದಿಗಳನ್ನು ಹೆಸರಿಸಿದ. ಕಟ್ಟಕಡೆಗೆ ಯಥಾರ್ಥತಾವಾದ ವಿಜಯ ಸಾಧಿಸಿತು. ಜಾರ್ಜ್ ಬ್ರಾಂಡಿಸನ ಪ್ರಸಿದ್ಧ ಕೃತಿಯಾದ ಮೇನ್ ಕರೆಂಟ್ಸ್ ಇನ್ ನೈಂಟೀಂತ್ ಸೆಂಚುರಿ ಲಿಟರೇಚರ್ ಮತ್ತು ಅವನ ಅಪಾರವಾದ ವಿಮರ್ಶನ ಕೃತಿಗಳು ಡೆನ್‍ಮಾರ್ಕಿನ ಚಿಂತನಶೀಲರಿಗೆಲ್ಲ ದಿಗ್‍ದರ್ಶಕಗಳಾದವು. 

	ಯಥಾರ್ಥತಾ ವಾದದ ಪ್ರಭಾವ 1880ರಿಂದಾಚೆಗೆ ಇನ್ನೂ ಹೆಚ್ಚಿತು. ಹೆನ್ರೀಕ್ ಪಾಂಟಾಪಿಡಾನ್ (1857-1943) ತನ್ನ ಕಾದಂಬರಿಗಳಲ್ಲಿ ಮಾನವ ಸಮಾಜದ ಕಠೋರ ಪರಿಸ್ಥಿತಿಗಳನ್ನೂ ಕ್ರೂರ ವಿಷಮತೆಗಳನ್ನೂ ನಿಷ್ಠುರವಾದ ರೀತಿಯಲ್ಲಿ ಚಿತ್ರಿಸಿದ್ದಾನೆ. ಡೆಟ್ ಫರ್‍ಯೀಟೀಡ್ ಲ್ಯಾಂಡ್ (ಮೋಹಿತ ಲೋಕ), ಲೈಕ್-ಪರ್ (ಭಾಗ್ಯಶಾಲಿಯಾದ ಪರ್) ಮತ್ತು ಡಿಡೋಡೆಸ್‍ರೈಗೆ (ಮೃತರ ರಾಜ್ಯ) ಎಂಬುವು ಈತನ ಪ್ರಸಿದ್ಧ ಕಾದಂಬರಿಗಳು. ಇವುಗಳಿಗಾಗಿ ಪಾಂಟಾಪಿಡಾನನಿಗೆ 1917ರಲ್ಲಿ ನೊಬೆಲ್ ಪಾರಿತೋಷಿಕ ದೊರೆಯಿತು. 

ಹರ್ಮಾಂಕ್ ಬಾಂಗ್ (1857-1912) ಎಂಬಾತನ ಕಾದಂಬರಿಗಳಲ್ಲೂ ಸಣ್ಣ ಕಥೆಗಳಲ್ಲೂ ಯಥಾರ್ಥವಾದದ ಅಂತಿಮ ವಿಜಯವನ್ನು ಕಾಣಬಹುದು. ಗಸ್ಟಾಫ್ ವೀಡ್ (1859-1914) ಎಂಬ ವಿಡಂಬನಕಾರ ತನ್ನ ಕಾದಂಬರಿಗಳು. ಕಥೆಗಳು ಮತ್ತು ವ್ಯಂಗ್ಯ ನಾಟಕಗಳಲ್ಲಿ ಯಥಾರ್ಥತಾವಾದವನ್ನು ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕಕ್ಕೂ ಮುಂದುವರಿಸಿದ. ಹೋಲ್‍ಬರ್ಗನ ತರುವಾಯ ಹಾಸ್ಯದ ಹೊನಲು ಮಹಾಪೂರದಂತೆ ಹರಿಯುವುದು ವೀಡನ ಕೃತಿಗಳಲ್ಲೇ. ಯಥಾರ್ಥತಾವಾದ ವೀಡನಲ್ಲೇ ಅವಸಾನಗೊಂಡಿತೆನ್ನಬೇಕು. ಯೋಹಾನ್ಸ್ ಯೋರ್ಗೆನ್ಸನ್ (1866-1956), ಸೋಫಸ್ ಕ್ಲೌಸರ್ (1865-1931), ವಿಗ್ ಸ್ಟಾಕೆನ್‍ಬರ್ಗ್ (1863-1905) ಮತ್ತು ಹೆಲ್ಗೆ ರೋಡ್ (1870-1937) ಎಂಬವರು ಭಾವಗೀತೆಗಳನ್ನು ಬರೆದರು. ಆದರೆ ಇದರಲ್ಲಿ ಸ್ವಂತಿಕೆಗಿಂತ ಫ್ರೆಂಚ್ ಕವಿಗಳಾದ ವೆರ್‍ಲೆನ್, ಬೋದಲೇರ್ ಮುಂತಾದವರ ಪ್ರಭಾವ ಹೆಚ್ಚಾಗಿ ಕಂಡುಬರುತ್ತದೆ. 

ನೂತನ ಯಥಾರ್ಥತಾವಾದ ಮತ್ತು ನೂತನ ರೊಮ್ಯಾಂಟಿಕ್ ವಾದಗಳ ಯುಗ : 20ನೆಯ ಶತಮಾನ ಹೊಸ ಶತಮಾನದ ಉದಯದೊಡನೆ ಹೊಸ ಶಕ್ತಿಗಳ ಉದಯವೂ ಆಯಿತು. ಮಧ್ಯಮ ವರ್ಗದವರಿಗೆ ಸರಿಸಮನಾಗಿ ರೈತರೂ ಕಾರ್ಮಿಕರೂ ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದರು. ಯಥಾರ್ಥತಾವಾದ ನೂತನ ರೂಪ ತಾಳಿತು. ಸಾಮಾಜಿಕ ಸಮಸ್ಯೆಗಳನ್ನೊಳಗೊಂಡ ಪ್ರಾಂತೀಯ ಸಾಹಿತ್ಯ ಸೃಷ್ಟಿಯಾಯಿತು. ಯಾಕಬ್ ನೂಡ್‍ಸನ್ (1858-1917) ಎಂಬಾತ ರೈತವರ್ಗದ ಪ್ರತಿನಿಧಿಯಾದರೆ, ಯೋಹಾನ್ ಸ್ಕ್ಯೋಲ್ಡ್‍ಬಾರ್ಗ್ (1861-1936) ಮತ್ತು ಯೆಪ್ ಅಕ್‍ಯೇರ್ (1866-1930) ಇವರಿಬ್ಬರೂ ಕೃಷಿಕ ಕಾರ್ಮಿಕರ ಪ್ರತಿನಿಧಿಗಳೆನ್ನಬಹುದು. ಆಕ್‍ಯೇರನ ವಿಪ್ಲವಕಾರಿಯಾದ ಗದ್ಯಕೃತಿಗಳಿಗಿಂತ ಆತನ ಸುಶ್ರಾವ್ಯವಾದ ಕವನಗಳು ಅದ್ಭುತವಾಗಿವೆ. ಇವುಗಳಲ್ಲಿ ಭವ್ಯವಾದ ಪ್ರಕೃತಿ ವರ್ಣನೆಯಿದೆ. ಸ್ತುತಿಗೀತೆಗಳನ್ನೂ ಇತರ ಗೀತೆಗಳನ್ನೂ ಬರೆದ ಗ್ರುಂಟ್‍ವಿಗ್ ಮತ್ತು ಆಕ್‍ಯೇರರನ್ನು ಡೆನ್‍ಮಾರ್ಕಿನ ಕಾವ್ಯ ವಾಣಿಯೆಂದೇ ಕರೆಯಬಹುದು. ಆಕ್‍ಯೇರನಂತೆಯೇ ಜಟ್‍ಲಂಡ್ ಪ್ರಾಂತದವನಾದ ತೋಗರ್ ಲಾರ್ಸನ್ (1875-1928) ಅವನಷ್ಟೇ ಪ್ರತಿಭಾವಂತ ಕವಿ. ಈತನ ಕಾವ್ಯದಲ್ಲಿ ಒಂದು ವಿಶ್ವವಿಶಾಲವಾದ ಉದಾರದರ್ಶನ ಕಂಡುಬರುತ್ತದೆ. ಪ್ರತ್ಯೇಕ ವೈಶಿಷ್ಟ್ಯವುಳ್ಳ ಇತರ ಪ್ರಾಂತೀಯ ಕವಿಗಳೆಂದರೆ, ಜಟ್‍ಲಂಡಿನ ಮೇರಿ ಬ್ರೇಗೆಂಡಾಲ್ (1867-1940), ತಾಮಸ್ ಓಲ್ಸನ್ ಲೋಕನ್ (1877- ) ಹಾಗೂ ಯೋರ್ಗನ್ ನೀಲ್ಸನ್ (1902-1945) ಮತ್ತು ಜೀಲಂಡಿನ ನುಡ್ ಯೋರ್ಟೋ (1868-1931) ಹಾಗೂ ತೋರ್‍ಕಿಲ್ಡ್ ಗ್ರೇಫ್ ಲುಂಡ್ (1879-1939) ಎಂಬವರು. 

	ಮಾರ್ಟಿನ್ ಅಂಡರ್ಸನ್ ನೆಕ್ಸೋ (1869-1954) ಎಂಬಾತ ಪೆಲ್ ಈರೋ ಬ್ರೆರೆನ್ (ವಿಜಯಿಯಾದ ಪೆಲ್) ಮತ್ತು ಡಿಟ್ ಮೆನೆಸ್ಕ್‍ಬಾರನ್ (ಮಾನವನ ಶಿಶು ಡಿಟ್) ಮುಂತಾದ ಮಹಾ ಕಾದಂಬರೀ ಚಕ್ರಗಳನ್ನೂ ಅವನ್ನೂ ಮೀರಿಸುವ ನೆನಹುಗಳನ್ನೂ ಬರೆದ. ಈತನಿಂದಾಗಿ ಕಾರ್ಮಿಕ ವರ್ಗಕ್ಕೆ ಸಮಾಜದಲ್ಲಿ ಹೇಗೋ ಹಾಗೆ ಸಾಹಿತ್ಯ ಕ್ಷೇತ್ರದಲ್ಲೂ ಸಲ್ಲಬೇಕಾದ ಸ್ಥಾನಮಾನ ದೊರಕಿತು. ನೆಕ್ಸೋವಿನ ಬಳಿಕ 1920ರ ದಶಕದಲ್ಲೂ 1930ರ ದಶದಲ್ಲೂ ಉದಾರಮನಸ್ಕರೂ ಸಮಾಜಾಸಕ್ತರೂ ಆದ ಲೇಖಕರು ಸಾಲುಸಾಲಾಗಿ ಬಂದರು. ಇವರಲ್ಲಿ ಮಂದಗಾಮಿಗಳೆಂದರೆ ಲೆಕ್ ಫಿಷರ್ (1904- ) ಮತ್ತು ನುತ್ ಬೆಕರ್ (1893- ) ಎಂಬುವರು. ತೀವ್ರ ಸಮಾಜವಾದಿಗಳೆಂದರೆ ಹೆರಾಲ್ಡ್ ಹರ್ಡಲ್ (1900- ) ಮತ್ತು ಅವನ ಅನುಯಾಯಿಗಳಾದ ಹಾನ್ಸ್ ಕರ್ಕ್ (1898- ) ಮತ್ತು ಹಾನ್ಸ್ ಷೆರ್‍ಫಿಗ್ (1905- ) ಎಂಬುವರು. ಕರ್ಕ್ ಮತ್ತು ಷೆರ್‍ಫಿಗ್ ತೀಕ್ಷ್ಣ ವಿಡಂಬನಕಾರರು, ಏರುಪೇರುಗಳಿಂದ ಸಮಾಜದ ಉಗ್ರಖಂಡನಕಾರರು. 

ಯೋಹಾನ್ಸ್ ವಿಲೆಲ್ಮ್ ಯೆನ್ಸನ್ (1873-1950) ಎಂಬಾತ ಹಿಂದೆ ಹೇಳಿದ ಪ್ರಾಂತೀಯ ಲೇಖಕನ್ನೆಲ್ಲ ಮೀರಿಸಿದ ಪ್ರತಿಭಾವಂತ. ಈತನೇ ಈ ಶತಮಾನದ ಶ್ರೇಷ್ಠತಮ ಸಾಹಿತಿಯೆನ್ನಬಹುದು. ತನ್ನ ಅಮೆರಿಕದ ಪ್ರವಾಸದ ಪ್ರಭಾವದಿಂದ ಸ್ಫೂರ್ತಿಗೊಂಡು ಈತ ಬರೆದ ಡೆನ್ ಗೋತಿಸ್ಕ್ ರೆನೆಸಾನ್ಸ್ (ಗಾತಿಕ್ ನವೋದಯ) ಎಂಬ ಪ್ರಣಾಳಿಕೆಯಲ್ಲಿ ಈತ ಆಧುನಿಕ ತಾಂತ್ರಿಕ ವಿe್ಞÁನದ ಪ್ರಗತಿಯನ್ನು ಅಪಾರ ಉತ್ಸಾಹದಿಂದ ಶ್ಲಾಘಿಸಿದ. ಮ್ಯಾದಮ್ ದೋರ ಮತ್ತು ಹ್ಯೂಲೆಟ್ (ಚಕ್ರ) ಎಂಬ ಕಾದಂಬರಿಗಳಲ್ಲಿ ಯೆನ್ಸನ್ ತಾಂತ್ರಿಕ ಪ್ರಗತಿ ಸಾಧಿಸಿರುವ ಅಮೆರಿಕವನ್ನು ವರ್ಣಿಸಿದ್ದಾನೆ. ಡೆನ್‍ಲಾಂಗ್ ರೇಸ್ (ದೀರ್ಘ ಸಂಚಾರ) ಎಂಬುದು ಈತನ ಕಾಲ್ಪನಿಕ ಕಾದಂಬರೀ ಚಕ್ರ. ಶ್ರೇತವರ್ಣೀಯ ಅತ್ಯಂತ ಆದಿಕಾಲದಿಂದ ಕ್ರಿಸ್ಟೊಫರ್ ಕೊಲಂಬಸನವರೆಗೂ ನಿಸರ್ಗದೊಡನೆ ಹೋರಾಡಿ ಗಳಿಸಿದ ಪ್ರಚಂಡ ವಿಜಯ, ಬಳಿಕ ಜಟ್‍ಲಂಡಿನಿಂದ ದೂರಪ್ರಾಚ್ಯಕ್ಕೆ ಮಾಡಿದ ವಿಜಯಯಾತ್ರೆ. ಕಡೆಗೆ ಪ್ರಾಚೀನ ವೈಕಿಂಗ್ ವೀರರಂತೆ ಅವಸಾನ ಕಾಲಕ್ಕೆ ಸ್ವಭೂಮಿಗೇ ಹಿಂದಿರುಗಿದ್ದು-ಇವನ್ನೆಲ್ಲ ಯೆನ್ಸನ್ ತನ್ನ ಭಾವನಾಮಯವಾದ ಕಾದಂಬರೀ ಚಕ್ರದಲ್ಲಿ ವರ್ಣಿಸಿದ್ದಾನೆ. ಕ್ರಿಶ್ಚನ್ ಅಂಡರ್ಸನ್ನನಂತೆ ಈತನೂ ತನ್ನ ವಸ್ತುವಿಗೆ ತಕ್ಕ ಮಾಧ್ಯಮವಾದ ಕಾವ್ಯಪ್ರಕಾರವನ್ನು ನೂತನವಾಗಿ ಸೃಷ್ಟಿಸಿಕೊಂಡಿದ್ದಾನೆ. ಇದೊಂದು ಬಗೆಯ ಪುರಾಣಕಥಾನಕ. ಇದರಲ್ಲಿ ರೂಪಕತೆಯ ಭಾವನಾವೇಶ, ಪತ್ರಿಕೋದ್ಯಮದ ವೃತ್ತಾಂತಕಥನ, ವಿe್ಞÁನದ ನಿಷ್ಕøಷ್ಟ e್ಞÁನ ಮತ್ತು ಭಾವಗೀತೆಯ ಸೌಂದರ್ಯ ಮಾಧುರ್ಯ-ಇವೆಲ್ಲದರ ಮಧುರ ಮಿಶ್ರಣವಿದೆ. 1944ರ ನೊಬೆಲ್ ಪಾರಿತೋಷಿಕವನ್ನು ಈತನಿಗೆ ಕೊಡಲಾಯಿತು. ಆದರೂ ಇಂಗ್ಲೆಂಡ್, ಅಮೆರಿಕ ಮುಂತಾದ ಹೊರದೇಶಗಳಲ್ಲಿ ಈತನ ಪರಿಚಯವೇ ಅಷ್ಟಾಗಿ ಇಲ್ಲದಿರುವುದು ವಿಸ್ಮಯಕರವಾದ ವಿಷಯ. 

	ಹೆರಾಲ್ಡ್ ಕಿಡ್ (1878-1918) ಮತ್ತು ಕಾರಿನ್ ಮೈಕಲಿಸ್ (1872-1950) ಎಂಬುವರು ಉತ್ತಮವಾದ ಗದ್ಯಲೇಖಕರು. ಮೈಕಲಿಸ್‍ನ ಕೃತಿಗಳು ವಿದೇಶಗಳಲ್ಲಿ ವಿಖ್ಯಾತವಾಗಿದೆ. ಈ ದಶಕದಲ್ಲಿ ವಿಡಂಬನೆಗಳನ್ನು ಬರೆದ ಹೆರಾಲ್ಡ್ ಬರ್ಗ್‍ಸ್ಟೆಟ್ (1877- ) ಮತ್ತು ವಾಲ್ಡಿಮರ್ ರೋರ್‍ಡಮ್ (1872-1946) ಉತ್ತಮ ಕವಿಗಳು. ಆದರೆ ಯೆನ್ಸನ್ನನಂತೆ ಮುಂದಿನ ಪೀಳಿಗೆಯ ಮೇಲೆ ಪ್ರಭಾವ ಬೀರಿದವರು ಇನ್ನಾರೂ ಇಲ್ಲ. 1930ರ ದಶಕದ ಕವಿ ಹಾಗೂ ಕಾದಂಬರಿಕಾರನಾದ ಟಾಮ್ ಕ್ರಿಸ್ಟನ್‍ಸನ್ (1893- ) ಎಂಬುವನು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಶ್ರೇಷ್ಠತಮ ಭಾವಗೀತಕಾರ. ಆದರೆ ಈತನ ಕವಿತೆಗಳಲ್ಲೆಲ್ಲ ಮೊದಲನೆಯ ಮಹಾಯುದ್ಧದಿಂದ ಹುಟ್ಟಿದ ನಿರುತ್ಸಾಹ ನೈರಾಶ್ಯಗಳು ತುಂಬಿವೆ. ಯಾಕಬ್ ಪಾಲುಡನ್ (1896- ) ಎಂಬಾತನೂ ತನ್ನ ಕಾದಂಬರಿಗಳಲ್ಲಿ ಯುದ್ಧಕಾಲದ ಆತ್ಮಶೂನ್ಯತೆಯನ್ನು ಹೊರಗೆಡಹಿದ್ದಾನೆ. 

	1930ರ ದಶಕದಲ್ಲಿ ಯಥಾರ್ಥತಾವಾದದ ಪ್ರಭಾವ ಕುಗ್ಗುತ್ತ ಬಂದು ಒಂದು ನೂತನ ರೊಮ್ಯಾಂಟಿಕ್ ಮನೋವೃತ್ತಿ ಹುಟ್ಟಿತು. ನಿಸ್ ಪೇಟರ್ಸನ್ (1897-1943) ಎಂಬ ಅಲೆಮಾರಿ ಕವಿ ಉತ್ತಮ ಕಥಾಕಾರ ಹಾಗೂ ಅದ್ಭುತ ಭಾವಗೀತಕಾರ. ಸ್ಯಾಂಡಲ್ ಮೇಗನ್ರ್ಸ್‍ಗೇಡ್ (ಮೆಟ್ಟುಗಾರರ ಬೀದಿ) ಮತ್ತು ಸ್ಟಿಲ್ಟ್ ಮಿಲ್ಕ್ (ಚೆಲ್ಲಿಹೋದ ಹಾಲು) ಎಂಬ ಕಾದಂಬರಿಗಳಿಂದ ಈತ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ. ಬ್ಯಾರೊನೆಸ್ ಕಾರೆನ್ ಬ್ಲಿಕ್ಸನ್ ಫಿನೆಕೆ ಎಂಬಾಕೆ ಐಸ್ಯಾಕ್ ಡೈನ್‍ಸನ್ ಎಂಬ ಕಾವ್ಯನಾಮವನ್ನಿಟ್ಟುಕೊಂಡು ಸೆವೆನ್ ಗಾತಿಕ್ ಟೇಲ್ಸ್ ಎಂಬ ಕಥಾಸಂಕಲವನ್ನು ಮೊದಲಿಗೆ ಇಂಗ್ಲೆಂಡಿನಲ್ಲಿ ಪ್ರಕಟಿಸಿದಳು. ಈಕೆಯ ಔಟ್ ಆಫ್ ಆಫ್ರಿಕ ಮತ್ತು ವಿಂಟರ್ಸ್ ಟೇಲ್ಸ್ ಎಂಬುವು ಇತರ ಕೃತಿಗಳ ಭಾಷಾಂತರಗಳು. 

	ಒಂದು ಶತಮಾನ ಪರ್ಯಂತ ಶೂನ್ಯಸ್ಥಿತಿಯಲ್ಲಿದ್ದ ಡೇನಿಷ್ ರಂಗಭೂಮಿ ಕಾಜ್ ಮಂಕ್ (1898-1944) ಎಂಬ ಪ್ರತಿಭಾಶಾಲಿ ಪಾದ್ರಿಯ ನಾಟಕಗಳಿಂದ ಪುನಶ್ಚೇತನಗೊಂಡಿತು. ಎನ್ ಐಡಿಯಲಿಸ್ಟ್ (ಆದರ್ಶವಾದಿ) ಮತ್ತು ಆರ್ಡೆಟ್ (ಪ್ರಪಂಚ) ಎಂಬುವು ಈತನ ಉತ್ತಮ ನಾಟಕಗಳು. 1940ರಲ್ಲಿ ಈತ ಜರ್ಮನಿಯ ಸರ್ವಾಧಿಕಾರದ ವಿರುದ್ಧ ನಡೆದ ಹೋರಾಟದಲ್ಲಿ ರಾಷ್ಟ್ರೀಯ ಪಕ್ಷ ಹಿಡಿದು ನೀಲ್ಸ್ ಎಬ್‍ಸನ್ ಮತ್ತು ಫೋರ್ ಕ್ಯಾನೀ (ಕ್ಯಾನೀಗೆ ಮುನ್ನ) ಎಂಬ ನಾಟಕಗಳನ್ನು ಬರೆದು ಹಿಟ್ಲರನ ದೌರ್ಜನ್ಯವನ್ನು ಖಂಡಿಸಿದ ಜರ್ಮನರು ಡೆನ್ಮಾರ್ಕನ್ನು ಆಕ್ರಮಿಸಿದ್ದಾಗ ಅವರ ಕೈಯಿಂದ ಹತನಾಗಿ ಈತ ರಾಷ್ಟ್ರೀಯ ಸಂಕೇತವಾದ. ಕೀಲ್ಡ್ ಅಬೆಲ್ (1901- ) ಸೃಷ್ಟಿಶೀಲ ನಾಟಕಕಾರ. ಕಾರ್ಲ್ ಎರಿಕ್ ಸೊಯಾನ (1896- ) ನಾಟಕಗಳು ಗಮನ ಸೆಳೆಯುವಂತೆ ಇದ್ದರೂ ಸಮಸ್ಯೆಗಳಾಗಿಯೇ ಉಳಿದಿವೆ. 

	1940ರ ದಶಕದಲ್ಲೂ ಯಥಾರ್ಥವಾದದ ವಿರುದ್ಧ ನಡೆಯುತ್ತಿದ್ದ ರೊಮ್ಯಾಂಟಿಕ್ ಪ್ರತಿಭಟನೆ ಮುಂದುವರಿಯಿತು. ಇದರಿಂದಾಗಿ ಪ್ರತಿಮಾತ್ಮಕ ಕಾವ್ಯದ ಉದಯವಾಯಿತು. ಈ ಬಗೆಯ ಸಾಹಿತಿಗಳಲ್ಲಿ ಮಾರ್ಟಿನ್ ಆಲ್‍ಫ್ರೆಡ್ ಹಾನ್ಸನ್ (1900 - ) ಗಮನ ಸೆಳೆಯುವ ವ್ಯಕ್ತಿ. ಲೈಕ್‍ಲೀ ಕ್ರಿಸ್ಟೋಫರ್ (ಭಾಗ್ಯಶಾಲಿ ಕ್ರಿಸ್ಟೋಫರ್) ಮುಂತಾದ ಕಾದಂಬರಿಗಳಿಂದಲೂ ಟಾರನ್ ಬುಸ್ಕನ್ (ಮುಳ್ಳಿನ ಪೊದೆ) ಮೊದಲಾದ ಕಥಾಸಂಕಲನಗಳಿಂದಲೂ ಈತ ಹೆಸರು ಗಳಿಸಿದ್ದಾನೆ. ಟು ಮಿನುಟರ್ಸ್ ಸ್ಟಿಲ್‍ಹಡ್ (ಎರಡು ಕ್ಷಣಕಾಲ ಮೌನ) ಎಂಬ ಕಥಾಸಂಕಲನ ಮತತು ರೈಟರನ್ (ರಾವುತ) ಮುಂತಾದ ನಾಟಕಗಳನ್ನು ಬರೆದ ಹಾನ್ಸ್ ಕ್ರಿಶ್ಚನ್ ಬ್ರಾನರ್ (1903- ), ಆಗೆ ಡಾನ್ಸ್ (1903- ) ಎಂಬ ಕಾದಂಬರಿಕಾರ, ನುಡ್ ಸೋಂಡರ್‍ಬಿ (1909- ) ಎಂಬ ಕಾದಂಬರಿಕಾರ ಹಾಗೂ ನಾಟಕಕಾರ, ಇವರೆಲ್ಲ ಈ ನಡುಗಾಲದ ಉತ್ತಮ ಲೇಖಕರು. ಪಾಲ್ ಲೌಕೂರ್ (1902- ) ಎಂಬಾತ ಸೊಗಸಾದ ಕಲಾವಂತಿಕೆಯುಳ್ಳ ಭಾವಗೀತಕಾರ. 

	ಜರ್ಮನರು ಡೆನ್‍ಮಾರ್ಕನ್ನು ಆಕ್ರಮಿಸಿದ್ದ ಅವಧಿಯಲ್ಲೂ ಕಾಲೋಚಿತವಾದ ಸಾಹಿತ್ಯದ ಸೃಷ್ಟಿ ಆಯಿತು. ಜರ್ಮನರ ದುರಾಕ್ರಮಣವನ್ನೂ ದುರಾಡಳಿತ ದೌರ್ಜನ್ಯಗಳನ್ನೂ ಪ್ರತಿಭಟಿಸಿದ ತರುಣರು ಬರೆದ ದಿನಚರಿಗಳು ಹಾಗೂ ಪತ್ರಗಳು ಸ್ಥಿರವಾದಿ ಉಳಿಯುವಂಥವು : ಅವುಗಳಲ್ಲಿ ಅಂಥ ಕರುಣಾಜನಕವಾದ ಭಾವುಕತೆ ಇದೆ. 1940ರ ದಶಕದಲ್ಲೂ ಒಳ್ಳೆಯ ಪದ್ಯಕಾವ್ಯ ಹುಟ್ಟಿತು. ಹಾಸಡನ್ ರಾಸ್‍ಮಸನ್ (1915- ) ಮತ್ತು ಎರಿಕ್ ನುಡ್‍ಸನ್ (1922- ) ಎವರ ಕಾವ್ಯದಲ್ಲಿ ಪರಮಾಣುಯುಗದ ಕಳವಳ ಒಡಮೂಡಿದೆ. ಈ ಅವಧಿಯಲ್ಲಿ ವರಕವಿಯಾದ ತರುಣ ಫ್ರಾಂಕ್ ಯೇಗರ್ (1926- ) ಮತ್ತು ಉಜ್ಜ್ವಲ ಭವಿಷ್ಯವುಳ್ಳ ಇತರ ತರುಣ ಕವಿಗಳೂ ವೀರ್ಯವಂತವಾದ ಸಾಹಿತ್ಯವನ್ನು ಸೃಷ್ಟಿಸುತ್ತಿದ್ದಾರೆ.					(ಕೆ.ವಿ.ಎಸ್.ಟಿ.)

	ಬಿಷಪ್ ಪೀಡರ್ ಪೆಲೇಡಿಅಸ್ ಬರೆದ ವಿಸಿಟೇಷನ್ ಬುಕ್‍ನಲ್ಲಿ 16ನೆಯ ಶತಮಾನದ ಡೇನಿಷ್ ಬದುಕನ್ನು ಚಿತ್ರಿಸಿದ. ಓಲೆನ್‍ಷ್ಲಾಜರನ ಭಾವಗೀತೆಗಳು, ನಾಟಕಗಳು, ಡೇನಿಷ್ ರೋಮ್ಯಾಂಟಿಕ್ ಸಾಹಿತ್ಯಕ್ಕೆ ತನ್ನತನವನ್ನು ತಂದುಕೊಟ್ಟವು. 

	ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ವಾಸ್ತವತಾವಾದ ಮತ್ತು ನ್ಯಾಚುರಲಿಸಂ ಕಾಣಿಸಿಕೊಂಡವು. ಆದರೆ ಫ್ರೆಂಚ್ ಪ್ರತೀಕವಾದದ ಕವಿಗಳ ಪ್ರಭಾವದಿಂದ ನ್ಯಾಚುರಲಿಸಂನ ವಿರುದ್ಧ ಪ್ರತಿಕ್ರಿಯೆಯು ಪ್ರಾರಂಭವಾಯಿತು. ಭಾವಗೀತೆಗಳು ಮತ್ತೆ ಕಾಣಿಸಿಕೊಂಡವು. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ದೇಶಾಭಿಮಾನ, ಸಾಮಾಜಿಕ ವಾಸ್ತವತೆಗಳು ಸ್ವಭಾವಯುತ ಶಕ್ತಿಗಳಾದವು. ಕೂಲಿಕಾರ ರೈತರ ಜೀವನದ ಕಷ್ಟಕಾರ್ಪಣ್ಯಗಳನ್ನು ಮಾರ್ಟಿನ್ ನೆಕ್ಸೋ ತನ್ನ ಕಾದಂಬರಿಗಳಲ್ಲಿ ಚಿತ್ರಿಸಿದ. 
`ಡಿಟೆ ಡಾಟರ್ ಆಫ್ ಮ್ಯಾನ್' ಕಾದಂಬರಿಯಲ್ಲಿ ಹಣ್ಣಾದ ತರುಣಿಯ ಬದುಕನ್ನು ಚಿತ್ರಿಸಿದ.

	ಐಸಕ್ ಡಿನೆಸನ್ ಎಂಬಾಕೆ `ಸೆವೆನ್ ಗಾಥಿಕ್ ಟೇಲ್ಸ್' (1934) ಮತ್ತು ಆತ್ಮವೃತ್ತ `ಔಟ್ ಆಫ್ ಆಫ್ರಿಕ' (1937) ಕೃತಿಗಳಿಂದ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದಳು. ಈಕೆ ಪ್ರತೀಕಗಳನ್ನೂ `ಮಿಥ್'ಗಳನ್ನೂ ಬಳಸಿಕೊಂಡಳು. ಎರಡನೆಯ ಮಹಾಯದ್ಧ ಮುಗಿದನಂತರ ಇನ್ನೂ ಭಯಂಕರ ಅಸ್ತ್ರಗಳನ್ನು ಉತ್ಪಾದಿಸುವ ಸಾಧ್ಯತೆಯು ಮಾನವನಾಗರಿಕತೆಗೇ ಆತಂಕವನ್ನು ತಂದಿತು. ಈ ಕಾಲದ ಬರಹಗಾರರಲ್ಲಿ ಹಲವರು ಅಸ್ತಿತ್ವವಾದದ ಮನೋಧರ್ಮದವರು. 1948-53ರ ಅವಧಿಯ ಸಾಹಿತ್ಯಕ ಪತ್ರಿಕೆ ಹೆರೆಟಿಕ್ ಈ ಆತ್ಮಕಥೆ ಕನ್ನಡಿಯಾಯಿತು. ತಾರ್ಕಿಲ್ಡ್ ಬೋರ್ನ್‍ವಿಗ್, ಓಲ್ ಸರ್‍ವಿಗ್ ಮತ್ತು ಓಲ್‍ವಿನೆಲ್-ಈ ಎಲ್ಲ ಕವಿಗಳ ವಸ್ತು, ಆಧುನಿಕ ಜಗತ್ತಿನಲ್ಲಿ ಮನುಷ್ಯನ ಸ್ಥಾನ ಕಾದಂಬರಿಕಾರರಾದ ಎಲಿ ಸೂರೆನ್‍ಸನ್ ಮತ್ತು ಕ್ಲಾಸ್ ರಿಫ್‍ಬ್ಯರ್ಗ್‍ರ ವಸ್ತುವೂ ಇದೇ. ಕಾಯ್ ಮಂಕ್‍ನ ನಾಟಕಗಳಲ್ಲಿ ಧಾರ್ಮಿಕ ಮನೋಧರ್ಮ ಧ್ವನಿತವಾಗಿದೆ.
											ಪರಿಷ್ಕರಣೆ
										   ಪ್ರೊ.ಎಲ್.ಎಸ್.ಎಸ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ